ಬೆಂಗಳೂರು: ರಾಜ್ಯದಲ್ಲಿ ಮಕ್ಕಳು, ಮಹಿಳೆಯರು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ರೀತಿಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಲಾಗುತ್ತಿದೆ. ಡಿಸೆಂಬರ್ ನಿಂದ ಈ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.
ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳು, ಕ್ಯಾಬ್ ಗಳು, ಖಾಸಗಿ ಬಸ್ ಗಳಲ್ಲಿ ಅಳವಡಿಸಲಾಗುವುದು. ಇದರಿಂದ ಸಂಭವನೀಯ ಅಪರಾಧ ನಿಯಂತ್ರಣ ಸಾಧ್ಯವಿದೆ. ಮಹಿಳೆಯರು, ಮಕ್ಕಳು, ಪ್ರಯಾಣಿಕರಿಗೆ ರಕ್ಷಣೆ ಸಿಗಲಿದೆ. ಕಳ್ಳತನದಂತಹ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಅನುಕೂಲವಾಗುತ್ತದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣ ತಡೆಯಬಹುದಾಗಿದೆ.
ಜಿಪಿಎಸ್ ಮಾನಿಟರಿಂಗ್ ನಕ್ಷೆಯಲ್ಲಿ ವಾಹನಗಳ ನೈಜ ಸಮಯದ ಟ್ರ್ಯಾಕಿಂಗ್ ಮಾಡಲಾಗುತ್ತದೆ. ವಾಹನ ಎಲ್ಲಿದೆ, ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎಂಬುದರ ಮಾಹಿತಿ ಸಿಗಲಿದೆ. ವಾಹನದಲ್ಲಿರುವ ಪ್ರಯಾಣಿಕರಿಗೆ ತುರ್ತು ಪರಿಸ್ಥಿತಿ ಎದುರಾದರೆ ಪ್ಯಾನಿಕ್ ಬಟನ್ ಒತ್ತಿದಾಗ ಕಮಾಂಡ್ ಸೆಂಟರ್ ಗೆ ಸಂದೇಶ ರವಾನೆಯಾಗಿ ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಿ ನೆರವಿಗೆ ಸೂಚಿಸಬಹುದು.
ಟೆಂಡರ್ ಮೂಲಕ 13 ಕಂಪನಿಗಳನ್ನು ಅಂತಿಮಗೊಳಿಸಿದ ಸಾರಿಗೆ ಇಲಾಖೆ ಈ ಕುರಿತು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆತ ಕೂಡಲೇ ಯೋಜನೆ ಜಾರಿಯಾಗಿವೆ ಎನ್ನಲಾಗಿದೆ.