ನವದೆಹಲಿ: ದೇಶಾದ್ಯಂತ ವಾಹನಗಳಿಗೆ ಏಕರೂಪದ ಹೊಗೆ ತಪಾಸಣೆ ಪ್ರಮಾಣ ಪತ್ರವನ್ನು ನೀಡಲು ಸಾರಿಗೆ ಸಚಿವಾಲಯ ಮುಂದಾಗಿದೆ.
ಕ್ಯೂಆರ್ ಕೋಡ್ ಆಧಾರಿತ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿದರೆ ವಾಹನದ ಮಾಲೀಕ, ಹೊಗೆಯುಗುಳುವ ಸ್ಥಿತಿ ಗತಿಗಳ ಬಗ್ಗೆ ಮಾಹಿತಿಗಳು ಸಿಗಲಿವೆ. ಕ್ಯೂಆರ್ ಕೋಡ್ ಆಧಾರಿತ ಪಿಯುಸಿ -ಪೊಲ್ಯೂಷನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರದಲ್ಲಿ ವಾಹನಗಳ ಸಂಪೂರ್ಣ ಮಾಹಿತಿ ಇರುತ್ತದೆ. ಯಾರಾದರೂ ವಾಹನ ಕಳವು ಮಾಡಿ ಪಿಯುಸಿ ಸರ್ಟಿಫಿಕೇಟ್ ಪಡೆಯಲು ಹೋದರೆ ಪತ್ತೆ ಹಚ್ಚುವುದು ಸುಲಭವಾಗುತ್ತದೆ.
ಈ ಕುರಿತಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಅಭಿಪ್ರಾಯ ಕೇಳಿದೆ. ವಾಹನ ಹೊಗೆ ತಪಾಸಣೆ ನಿಯಮಗಳಿಗೆ ಅನುಗುಣವಾಗಿ ಇಲ್ಲದಿದ್ದ ಸಂದರ್ಭದಲ್ಲಿ ವಾಹನವನ್ನು ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಬಹುದು. ತಪ್ಪಿತಸ್ಥರಿಗೆ ಮೂರು ತಿಂಗಳವರೆಗೆ ಜೈಲು, 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಲಾಗಿದೆ.