ವಿದೇಶಿ ವಿನಿಮಯ (ನಿಯಂತ್ರಣ) (ಎಫ್.ಸಿ.ಆರ್.ಎ) ಕಾಯ್ದೆ-2020 ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸುವ ಮೂಲಕ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಹೊರಟಿದೆ.
ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುತ್ತಿದ್ದು, 2010 ರಿಂದ 2019 ರ ಅವಧಿಯಲ್ಲಿ ವಿದೇಶದಿಂದ ಹರಿದುಬಂದ ಕೊಡುಗೆ ದ್ವಿಗುಣಗೊಂಡಿದೆ. ಆದರೆ, ಅದು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗಿಲ್ಲ. ಸರಿಯಾದ ಹಣಕಾಸು ಲೆಕ್ಕಾಚಾರ ಒಪ್ಪಿಸದ ಸರ್ಕಾರೇತರ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳ ವಿರುದ್ಧ ಕ್ರಿಮಿನಲ್ ತನಿಖೆಯೂ ನಡೆಯಲಿದ್ದು, 19 ಸಾವಿರ ಸಂಸ್ಥೆಗಳ ನೋಂದಣಿ ಪ್ರಮಾಣಪತ್ರ ರದ್ದುಪಡಿಸಲಾಗುವುದು ಎನ್ನಲಾಗಿದೆ.
ವಿದೇಶಿ ವಹಿವಾಟಿನ ಅವ್ಯವಹಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಫ್.ಸಿ.ಆರ್.ಎ. ಕಾಯ್ದೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದ್ದು, ನಿರ್ಬಂಧಿತ ವರ್ಗದಡಿ ಜನಸೇವಕರನ್ನೂ ಸೇರಿಸಲು ತೀರ್ಮಾನಿಸಿದೆ. ಯಾವುದೇ ಸಂಸ್ಥೆ, ಸಂಘಟನೆಗಳು ಆಡಳಿತಾತ್ಮಕ ವೆಚ್ಚಕ್ಕೆ ವಿದೇಶಿ ಹಣವನ್ನು ಶೇ.20 ಕ್ಕಿಂತ ಹೆಚ್ಚು ಬಳಸುವಂತಿಲ್ಲ. ಆಧಾರ್ ನೋಂದಣಿ ಕಡ್ಡಾಯ ಮಾಡಿದ್ದು, ವಾರ್ಷಿಕ ಲೆಕ್ಕಾಚಾರವನ್ನೂ ಕಡ್ಡಾಯವಾಗಿ ಒಪ್ಪಿಸಬೇಕೆಂಬ ನಿಯಮಗಳನ್ನು ತಿದ್ದುಪಡಿ ವಿಧೇಯಕದಲ್ಲಿ ಸೇರಿಸಲಾಗಿದೆ.