ನವದೆಹಲಿ: ಕೊರೋನಾ, ಮಳೆ ಹಾನಿ, ಪ್ರವಾಹ ಮೊದಲಾದ ಕಾರಣದಿಂದ ಸಂಕಷ್ಟದಲ್ಲಿರುವ ರೈತರು ಸಾಲಮನ್ನಾ ನಿರೀಕ್ಷೆಯಲ್ಲಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲವೆಂದು ಹೇಳಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಸೇರಿದಂತೆ ಎಲ್ಲ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದೆ.
ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆ 2008 ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ. ಯಾವುದೇ ಕೃಷಿ ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಸೇರಿದಂತೆ ರೈತರ ಸಾಲವನ್ನು ಮನ್ನಾ ಮಾಡಲು ಭಾರತ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ಸಚಿವರು ಹೇಳಿದ್ದಾರೆ.
ರೈತರ ಸಾಲದ ಹೊರೆ ಕಡಿಮೆ ಮಾಡಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಸೇರಿದಂತೆ ಕೃಷಿಯಲ್ಲಿ ತೊಡಗಿರುವ ಜನರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಪ್ರಮುಖ ಉಪಕ್ರಮಗಳ ಪಟ್ಟಿ ಮಾಡಿ ಉತ್ತರದಲ್ಲಿ ತಿಳಿಸಿದ್ದಾರೆ.
3 ಲಕ್ಷ ರೂ.ವರೆಗಿನ ಅಲ್ಪಾವಧಿ ಬೆಳೆ ಸಾಲಗಳಿಗೆ ಬಡ್ಡಿ ರಿಯಾಯಿತಿ, ಮೇಲಾಧಾರ ರಹಿತ ಕೃಷಿ ಸಾಲದ ಮಿತಿಯನ್ನು 1 ಲಕ್ಷದಿಂದ 1.6 ಲಕ್ಷ ರೂ.ಗೆ ಹೆಚ್ಚಿಸಲು ಕ್ರಮ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ವರ್ಷಕ್ಕೆ 6,000 ರೂ. ನೇರ ವರ್ಗಾವಣೆಯಂತಹ ಯೋಜನೆಗಳನ್ನು ಅವರು ಉಲ್ಲೇಖಿಸಿದ್ದಾರೆ.