alex Certify ಹೊಸ ವಾಹನ ಖರೀದಿಸುವವರು, ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕಿಂಗ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವಾಹನ ಖರೀದಿಸುವವರು, ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕಿಂಗ್ ನ್ಯೂಸ್

ನವದೆಹಲಿ: ರಸ್ತೆಗಳಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 15 ವರ್ಷಕ್ಕಿಂತ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು ಹೆಚ್ಚಿಸಲು ಕರಡು ಅಧಿಸೂಚನೆ ಹೊರಡಿಸಿದೆ.

2021 ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿರುವ ಕೇಂದ್ರ ಮೋಟಾರು ವಾಹನ ತಿದ್ದುಪಡಿ ನಿಯಮ -2021 ಅಧಿಸೂಚನೆಯ ಅನ್ವಯ 15 ವರ್ಷ ಹಳೆಯ ವಾಹನಗಳ ನವೀಕರಣ ಮತ್ತು ಫಿಟ್ನೆಸ್ ಪ್ರಮಾಣಪತ್ರದ ಶುಲ್ಕವನ್ನು ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ.

15 ವರ್ಷ ಮೇಲ್ಪಟ್ಟ ದ್ವಿಚಕ್ರವಾಹನಗಳ ಶುಲ್ಕ 1000 ರೂ., ತ್ರಿಚಕ್ರ, 4 ಚಕ್ರದ ವಾಹನಗಳ ನವೀಕರಣ ಸರ್ಟಿಫಿಕೇಟ್ ಗೆ 3500 ರೂ. ಹಾಗೂ ಲಘು ಮೋಟಾರು ವಾಹನಗಳ ಶುಲ್ಕವನ್ನು 7500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಮಧ್ಯಮ ಸರಕು ಅಥವಾ ಪ್ರಯಾಣಿಕರ ವಾಹನಗಳಿಗೆ 10 ಸಾವಿರ ರೂಪಾಯಿ, ಭಾರಿ ಸರಕು ಅಥವಾ ದೊಡ್ಡ ಪ್ರಯಾಣಿಕರ ವಾಹನಗಳಿಗೆ 12,500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಅವಧಿ ಮುಗಿದ ನಂತರದ ಫಿಟ್ನೆಸ್ ಪ್ರಮಾಣಪತ್ರ ಪಡೆಯಲು ಅವಧಿ ಮುಗಿದ ನಂತರದ ಪ್ರತಿ ದಿನಕ್ಕೆ 50 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು.

ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿರುವ ಸ್ವಯಂಪ್ರೇರಿತ ವಾಹನ ಸ್ಕ್ರಾಪಿಂಗ್ ನೀತಿಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ವೈಯಕ್ತಿಕ ವಾಹನಗಳಿಗೆ 20 ವರ್ಷ, ವಾಣಿಜ್ಯ ವಾಹನಗಳಿಗೆ 15 ವರ್ಷ ಪೂರ್ಣಗೊಂಡ ನಂತರ ಫಿಟ್ನೆಸ್ ಪರೀಕ್ಷೆ ಅಗತ್ಯವಿರುತ್ತದೆ. 15 ವರ್ಷದ ವಾಹನದ ನವೀಕೃತ ನೋಂದಣಿ 5 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

15 ವರ್ಷದ ವಾಹನಗಳಿಗೆ ಅನುದಾನ ನವೀಕರಣ ಮತ್ತು ಫಿಟ್ನೆಸ್ ಪ್ರಮಾಣಪತ್ರಗಳ ಪರೀಕ್ಷೆ ನಡೆಸುವ ಶುಲ್ಕವನ್ನು ಕೂಡ ಹೆಚ್ಚಳ ಮಾಡಲಾಗಿದೆ. ಹಸ್ತಚಾಲಿತ ಮೋಟಾರ್ ಸೈಕಲ್ ಗಳಿಗೆ 400 ರೂ., ಸ್ವಯಂ ಚಾಲಿತ ಮೋಟಾರ್ ಸೈಕಲ್ ಗಳಿಗೆ 500 ರೂ.ಶುಲ್ಕವಿದೆ.

ಹಸ್ತಚಾಲಿತ ಲಘು ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ತ್ರಿಚಕ್ರ ವಾಹನಗಳ ಪರೀಕ್ಷೆಗೆ 800 ರೂ., ಸ್ವಯಂ ಚಾಲಿತ ವಾಹನಗಳಿಗೆ 1000 ರೂ. ನಿಗದಿ ಮಾಡಲಾಗಿದೆ ಇದೇ ರೀತಿ ವಿವಿಧ ವಾಹನಗಳ ಶುಲ್ಕವನ್ನು ಕೂಡ ಹೆಚ್ಚಳ ಮಾಡಲಾಗಿದೆ.

15 ವರ್ಷಕ್ಕಿಂತ ಹಳೆಯದಾದ ಹಸ್ತಚಾಲಿತ ಮಧ್ಯಮ ಸರಕು / ಪ್ರಯಾಣಿಕರ ವಾಹನಗಳ ಮಾಲೀಕರು ಅನುದಾನ ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳ ನವೀಕರಣಕ್ಕಾಗಿ ಪರೀಕ್ಷೆ ನಡೆಸಲು 800 ರೂ., ಸ್ವಯಂಚಾಲಿತ ಆವೃತ್ತಿಗಳಿಗೆ 1,300 ರೂ. ಪಾವತಿಸಬೇಕಿದೆ.

ಭಾರೀ ಸರಕು / ಪ್ರಯಾಣಿಕ ವಾಹನಗಳ ಸಂದರ್ಭದಲ್ಲಿ ಹಸ್ತಚಾಲಿತ ವಾಹನಗಳಿಗೆ 1,000 ರೂ ಮತ್ತು ಸ್ವಯಂಚಾಲಿತ ವಾಹನಗಳಿಗೆ 1,500 ರೂ. ಕಟ್ಟಬೇಕಿದೆ.

30 ದಿನಗಳ ಅವಧಿಯಲ್ಲಿ ತಮ್ಮ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಚಿವಾಲಯವು ತಿಳಿಸಿದೆ.

ಹೊಸ ಮೋಟಾರ್‌ ಸೈಕಲ್‌ಗಳ ನೋಂದಣಿ ಶುಲ್ಕವನ್ನು ಮತ್ತು ತ್ರಿಚಕ್ರ ಅಥವಾ 4 ಚಕ್ರದ ವಾಹನಗಳಿಗೆ ಕ್ರಮವಾಗಿ 300 ಮತ್ತು 600 ರೂ. ಶುಲ್ಕವಿದೆ.

ಹೊಸ ಲಘು ಮೋಟಾರು ವಾಹನ, ಮಧ್ಯಮ ಸರಕುಗಳು / ಪ್ರಯಾಣಿಕ ವಾಹನಗಳು ಮತ್ತು ಭಾರೀ ಸರಕುಗಳು / ಪ್ರಯಾಣಿಕರ ವಾಹನಗಳಿಗೆ ಪ್ರಸ್ತಾವಿತ ನೋಂದಣಿ ಶುಲ್ಕವನ್ನು ಕ್ರಮವಾಗಿ 600, 1,000 ಮತ್ತು 1,500 ರೂ. ನಿಗದಿ ಮಾಡಲಾಗಿದೆ.

ಇದಲ್ಲದೆ, ನೋಂದಣಿ ಪ್ರಮಾಣಪತ್ರದ ನವೀಕರಣ ವಿಳಂಬವಾದರೆ, ಪ್ರತಿ ತಿಂಗಳು ಮೋಟಾರು ಸೈಕಲ್‌ಗೆ ಹೆಚ್ಚುವರಿಯಾಗಿ 300 ರೂ. ಪಾವತಿಸಬೇಕಾಗುತ್ತದೆ, ಉಳಿದ ವಾಹನಗಳಿಗೆ 500 ರೂ. ಕಟ್ಟಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...