ನವದೆಹಲಿ: ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 5 ರೂಪಾಯಿವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಂಡಿದೆ.
ಕೋವಿಡ್ ನಿಯಂತ್ರಣಕ್ಕೆ ಹಣಕಾಸು ಹೊಂದಿಸಲು ಅಬಕಾರಿ ಸುಂಕ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ಶೇಕಡ 18 ರಷ್ಟು ಮತ್ತು ಶೇಕಡ 12 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಸಂಸತ್ತು ಒಪ್ಪಿಗೆ ಪಡೆದಿತ್ತು.
ನಂತರದಲ್ಲಿ ಪೆಟ್ರೋಲ್ ಮೇಲೆ 12 ರೂ. ಮತ್ತು ಡೀಸೆಲ್ ಬೆಲೆ 9 ರೂ. ಸುಂಕ ಹೆಚ್ಚಿಸಲಾಗಿತ್ತು. ಈಗ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 3 ರೂಪಾಯಿ ಅಬಕಾರಿ ಸುಂಕ ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2014 ರಲ್ಲಿ ಕೇಂದ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 9.48 ರೂ., ಡೀಸೆಲ್ ಮೇಲೆ 3.56 ರೂಪಾಯಿ ಇತ್ತು. ಈಗ ಎರಡು ಇಂಧನಗಳ ಚಿಲ್ಲರೆ ಮಾರಾಟ ಬೆಲೆ ಸುಂಕದ ಪ್ರಮಾಣ ಶೇಕಡ 70ರಷ್ಟು ಇದೆ. ಇದು ಜಗತ್ತಿನಲ್ಲೇ ಅತಿಹೆಚ್ಚಿನ ಸುಂಕದ ಪ್ರಮಾಣ ಎಂದು ಹೇಳಲಾಗಿದೆ.