ಕೊರೊನಾ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು, ಉತ್ಪನ್ನಗಳು, ಉಪಕರಣಗಳು ಮತ್ತು ಲಸಿಕೆಗಳ ಮೇಲಿನ ಜಿಎಸ್‌ಟಿಯನ್ನು ಸರ್ಕಾರ ತೆಗೆದುಹಾಕುವ ಸಾಧ್ಯತೆಯಿದೆ. ಉತ್ಪನ್ನಗಳ ಮೇಲಿನ ಜಿಎಸ್ಟಿ ತೆಗೆದು ಹಾಕುವಂತೆ ಅನೇಕ ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಜಿಎಸ್ಟಿ ತೆಗೆದುಹಾಕುವ ನಿರ್ಧಾರವನ್ನು ಮುಂದಿನ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ.
7 ತಿಂಗಳ ಸುದೀರ್ಘ ಸಮಯದ ನಂತ್ರ ಜಿಎಸ್ಟಿ ಕೌನ್ಸಿಲ್ ಸಭೆ ಶುಕ್ರವಾರ ಮೇ 28ರಂದು ನಡೆಯಲಿದೆ. ಜಿಎಸ್ಟಿ ಕೌನ್ಸಿಲ್ ನ 43ನೇ ಸಭೆ ಇದಾಗಿದ್ದು, ಸಭೆಗೆ ದಿನಾಂಕ ನಿಗದಿಯಾಗಿರುವುದು ರಾಜ್ಯಗಳ ಸಂತೋಷಕ್ಕೆ ಕಾರಣವಾಗಿದೆ.
ಈ ಸಭೆಯಲ್ಲಿ ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ವಸ್ತುಗಳ ಜಿಎಸ್ಟಿ ಇಳಿಕೆಯಾಗಲಿದೆ ಎಂಬ ಭರವಸೆಯಲ್ಲಿ ರಾಜ್ಯ ಸರ್ಕಾರಗಳಿವೆ. ಕೊರೊನಾ ಲಸಿಕೆ ಮೇಲೆ ಶೇಕಡಾ 5ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಔಷಧಿ ಹಾಗೂ ಕೃತಕ ಆಕ್ಸಿಜನ್ ಮೇಲೆ ಶೇಕಡಾ 12 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ.
ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿಶ್ರಾ ಮೇ 9 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿದ್ದರು.