![](https://kannadadunia.com/wp-content/uploads/2021/03/msme-job-portal.png)
ನವದೆಹಲಿ: ಸರ್ಕಾರ ಜಾಬ್ ಪೋರ್ಟಲ್ ಆರಂಭಿಸಲಿದ್ದು, ಎಂಎಸ್ಎಂಇಗಳಲ್ಲಿ ಕಾರ್ಮಿಕರಾಗಲು ಅವಕಾಶ ಕಲ್ಪಿಸಲಾಗುವುದು.
ತಂತ್ರಜ್ಞಾನ ಮಾಹಿತಿ ಮುನ್ಸೂಚನೆ ಮತ್ತು ಮೌಲ್ಯಮಾಪನ ಮಂಡಳಿ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿ ಉದ್ಯೋಗ ಪೋರ್ಟಲ್ ಆರಂಭಿಸಿ ಎಂಎಸ್ಎಂಇಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಮಿಕರಿಗೆ ಕೌಶಲ್ಯ ಕಲಾತ್ಮಕ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುವುದು.
ಇದರಿಂದ ಮಧ್ಯವರ್ತಿಗಳು ಮತ್ತು ಕಾರ್ಮಿಕ ಗುತ್ತಿಗೆದಾರರ ಹಾವಳಿ ತಪ್ಪಿಸಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೌಶಲ್ಯ, ಪ್ರಾವೀಣ್ಯತೆಯ ಮಟ್ಟವನ್ನು ಗುರುತಿಸಲು ಕಾರ್ಮಿಕರಿಗೆ ಕೌಶಲ್ಯ ಕಾರ್ಡ್ ನೆರವಾಗಲಿದೆ. 10 ಲಕ್ಷ ಉದ್ಯೋಗ ಅವಕಾಶ ಕಲ್ಪಿಸಲು ಒತ್ತು ನೀಡಲಾಗಿದೆ. ಮಧ್ಯವರ್ತಿಗಳ ಸಂಪರ್ಕವಿಲ್ಲದೆ ನೇರವಾಗಿ ಎಂಎಸ್ಎಂಇಗಳೊಂದಿಗೆ ಕಾರ್ಮಿಕರ ಸಂಪರ್ಕ ಏರ್ಪಡಿಸಲಾಗುವುದು.
ಸಕ್ಷಮ ಜಾಬ್ ಪೋರ್ಟಲ್ ದೇಶಾದ್ಯಂತ ಎಂಎಸ್ಎಂಇಗಳ ಅವಶ್ಯಕತೆಗೆ ಅನುಗುಣವಾಗಿ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳ ಮಾಹಿತಿ ಸಂಗ್ರಹಿಸುತ್ತದೆ. ಇದರಿಂದಾಗಿ ಕೊರೋನಾ ಕಾರಣದಿಂದ ಊರಿನಲ್ಲೇ ಉಳಿದುಕೊಂಡವರಿಗೆ ಸಮೀಪದಲ್ಲೇ ಕೆಲಸದ ಅವಕಾಶ ಸಿಗಲಿದೆ.
ಕೌಶಲ್ಯ, ಪ್ರಾವೀಣ್ಯತೆ ಮಟ್ಟ ಗುರುತಿಸಿದ ನಂತರ ಕಾರ್ಮಿಕರಿಗೆ ಕೌಶಲ್ಯ ಕಾರ್ಡ್ ನೀಡಲಾಗುವುದು. ಇದರಿಂದ ಸಮೀಪದಲ್ಲಿ ಉದ್ಯೋಗ ಹುಡುಕಲು ಅನುಕೂಲವಾಗುತ್ತದೆ. 10 ಲಕ್ಷ ಉದ್ಯೋಗಿಗಳನ್ನು ಎಂಎಸ್ಎಂಇಗಳಿಗೆ ನಿಯೋಜಿಸಲು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಪೋರ್ಟಲ್ ಆರಂಭಿಸಲಾಗಿದೆ. ಆತ್ಮ ನಿರ್ಭರ ಭಾರತ ಭಾಗವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ತಂತ್ರಜ್ಞಾನ ಮಾಹಿತಿ, ಮುನ್ಸೂಚನೆ ಮತ್ತು ಮೌಲ್ಯಮಾಪನ ಮಂಡಳಿಯ ಕಾರ್ಯದರ್ಶಿ ಅಶುತೋಷ್ ಶರ್ಮಾ ಹೇಳಿದ್ದಾರೆ.
ಎಂಎಸ್ಎಂಇಗಳ ಹೊರತಾಗಿ ಇನ್ನೂ ಹಲವು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು. 50 ಮಿಲಿಯನ್ ಜನರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗಿದೆ.