ಬೆಂಗಳೂರು: ನಿವೇಶನ, ಜಮೀನು, ಫ್ಲಾಟ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರಾಜ್ಯ ಸರ್ಕಾರ ಭೂಮಿ ಮಾರ್ಗಸೂಚಿ ದರ ಕಡಿತಗೊಳಿಸಲು ಮುಂದಾಗಿದೆ.
ಕೃಷಿ ಜಮೀನು, ಕೃಷಿಯೇತರ ಜಮೀನು, ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಮಳಿಗೆಗಳ ಮಾರಾಟ ಮತ್ತು ಖರೀದಿಸುವಾಗ ಮಾರ್ಗಸೂಚಿ ದರ ಹೆಚ್ಚಾಗಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿ ದರ ಕಡಿತಗೊಳಿಸಿ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆಗೆ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಕೊರೋನಾದಿಂದಾಗಿ ನೆಲಕಚ್ಚಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೇತರಿಕೆ ನೀಡಲು ಮಾರ್ಗಸೂಚಿ ದರ ಕಡಿತಗೊಳಿಸಲಾಗುತ್ತದೆ. ಈ ಮೂಲಕ ಆದಾಯ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗಿದೆ.
ಮಾರ್ಗಸೂಚಿ ದರವನ್ನು ಪ್ರಸ್ತುತ ಇರುವ ದರಕ್ಕಿಂತ ಶೇಕಡ 15 ರಿಂದ 20 ರಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾಮಾನ್ಯವಾಗಿ ಪ್ರತಿವರ್ಷ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗುತ್ತದೆ. ಆದರೆ, ಈ ಬಾರಿ ಜಮೀನು, ಮನೆ, ನಿವೇಶಣ ಖರೀದಿಸುವವರಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ದರ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.