ನವದೆಹಲಿ: ರಸಗೊಬ್ಬರ ಸಬ್ಸಿಡಿ ಏರಿಕೆ ಮಾಡಲಾಗಿದೆ. ದೇಶದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಡಿಎಪಿ, ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ಕಳೆದ ತಿಂಗಳು ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇಕಡಾ 140 ರಷ್ಟು ಏರಿಕೆ ಮಾಡಲು ನಿರ್ಧರಿಸಿತ್ತು. ಬುಧವಾರ ಕೇಂದ್ರ ಸಚಿವ ಸಂಪುಟದಲ್ಲಿ ಡಿಎಪಿ ಮತ್ತು ಯೂರಿಯಾ ರಹಿತ ರಸಗೊಬ್ಬರ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ರೈತರಿಗೆ ಪ್ರತಿ ಚೀಲಕ್ಕೆ ಡಿಎಪಿ ಹಳೆಯ ದರ 1200 ರೂಪಾಯಿಗೆ ಸಿಗಲಿದೆ.
50 ಕೆಜಿ ಪ್ರತಿ ಚೀಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಚೀಲಕ್ಕೆ 500 ರೂ.ನಿಂದ 1200 ರೂ.ಗೆ ಹೆಚ್ಚಳ ಮಾಡಲಾಗಿದೆ. ಜಾಗತಿಕವಾಗಿ ಒಂದು ಚೀಲ ಡಿಎಪಿ ರಸಗೊಬ್ಬರ ದರ 2400 ರೂ. ಇದ್ದರೂ ರೈತರಿಗೆ ಪ್ರತಿ ಚೀಲಕ್ಕೆ 1200 ರೂ. ದರದಲ್ಲಿ ನೀಡಲಾಗುವುದು. ಕೇಂದ್ರಕ್ಕೆ 14,775 ಕೋಟಿ ರೂ. ಹೊರೆಯಾಗಲಿದೆ ಎನ್ನಲಾಗಿದೆ.