ಕೊರೊನಾ ಕಾರಣದಿಂದಾಗಿ ಬಹುಸಂಖ್ಯೆಯ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಖಾಯಂ ಆಗಿ ಬಿಟ್ಟಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಂಪನಿಗಳು ಉದ್ಯೋಗಿಗಳ ಮೇಲೆ ಒತ್ತಡ ಹಾಕುತ್ತಿದ್ದು, ವರ್ಕ್ ಫ್ರಮ್ ಹೋಮ್ ನಲ್ಲಿ ಅವಧಿ ಮೀರಿಯೂ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಉದ್ಯೋಗಿಗಳಿಗೆ ನೀಡುತ್ತಿರುವ ಸೌಲಭ್ಯಗಳು ಕಡಿತಗೊಂಡಿವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದಾಗ ವರ್ಕ್ ಫ್ರಮ್ ಹೋಮ್ ಇನ್ನೂ ಹಲವು ಕಾಲ ಮುಂದುವರೆಯುವ ಸಾಧ್ಯತೆ ಇದೆ. ಕೆಲಸದ ಅವಧಿಯನ್ನು ಮೀರಿಯೂ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ.
ವರ್ಕ್ ಫ್ರಂ ಹೋಮ್ ಕೆಲಸದ ಅವಧಿ, ಮೊದಲಾದ ನೀತಿ-ನಿಯಮಗಳ ರೂಪಿಸಲು ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಈ ವಿಚಾರ ಐಟಿ ವಲಯದ ಉದ್ಯೋಗಿಗಳಿಗೆ ನೆಮ್ಮದಿ ತರಲಿದೆ. ವರ್ಕ್ ಫ್ರಂ ಹೋಮ್ ನಿಂದಾಗಿ ಒತ್ತಡ ಹೆಚ್ಚಾಗಿದೆ. ಪತಿ-ಪತ್ನಿ ಕೆಲಸ ಮಾಡುತ್ತಿದ್ದರೆ ಮಕ್ಕಳ ಆನ್ಲೈನ್ ಶಿಕ್ಷಣದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಒಂದೇ ಮನೆಯಲ್ಲಿದ್ದರೂ ಜೊತೆಯಾಗಿರಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಕೆಲವೊಂದು ಸೌಲಭ್ಯಗಳನ್ನು ಪಡೆಯಲು ಉದ್ಯೋಗಿಗಳಿಗೆ ಸಾಧ್ಯವಾಗುತ್ತಿಲ್ಲ. ಇವೇ ಮೊದಲಾದ ಕಾರಣಗಳಿಂದ ನಿಯಮ ರೂಪಿಸಲು ಸಮಿತಿ ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ ಎರಡು ಸಲ ಸಭೆ ಸೇರಿ ಪರಾಮರ್ಶೆ ನಡೆಸಿದ್ದು ಮುಂದಿನ ದಿನಗಳಲ್ಲಿ ನಿಖರವಾದ ತೀರ್ಮಾನ ಕೈಗೊಳ್ಳಲಾಗುವುದು. ವರ್ಕ್ ಫ್ರಂ ಹೋಮ್ ನಿಯಮಗಳನ್ನು ಐಟಿ ಕಂಪನಿಗಳು ಡಿಸೆಂಬರ್ 31ರವರೆಗೆ ಮಾತ್ರ ವಿಸ್ತರಿಸಿವೆ. ಮುಂದಿನ ದಿನಗಳಲ್ಲಿ ಇದು ಪೂರ್ಣಪ್ರಮಾಣದಲ್ಲಿ ಅನ್ವಯವಾದರೆ ಅಚ್ಚರಿಪಡಬೇಕಿಲ್ಲ. ಇವೆಲ್ಲ ಕಾರಣಗಳಿಂದಾಗಿ ವರ್ಕ್ ಫ್ರಂ ಹೋಮ್ ಬಗ್ಗೆ ನಿಯಮ ರೂಪಿಸಲಾಗುವುದು ಎಂದು ಹೇಳಲಾಗಿದೆ.