ಬೆಂಗಳೂರು: ತೊಗರಿ ಬೆಳೆಗಾರರ ನೆರವಿಗೆ ಸರ್ಕಾರ ಕ್ರಮ ಕೈಗೊಂಡಿದ್ದು, ತೊಗರಿ ಬೆಳೆಹಾನಿಗೆ ಹೆಕ್ಟೇರ್ ಗೆ 10,000 ರೂ. ಪರಿಹಾರ ಘೋಷಿಸಿದೆ.
ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹಾಳಾಗಿದ್ದು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರ ಪ್ರತಿ ಹೆಕ್ಟೇರ್ ಗೆ 10,000 ರೂ. ನೀಡಲಿದೆ. NDRF/SDRF ಮಾರ್ಗಸೂಚಿ ಅನ್ವಯ ಗರಿಷ್ಠ ಎರಡು ಹೆಕ್ಟೇರ್ ಗೆ ಸೀಮಿತಗೊಳಿಸಿ ಸಂಕಷ್ಟಕೊಳ್ಳಗಾದ ರೈತರಿಗೆ ಪರಿಹಾರ ನೀಡಲಾಗುವುದು.
ಒಟ್ಟು ಪರಿಹಾರ ಮೊತ್ತ 223 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಅಕಾಲಿಕ ಮಳೆ ಮತ್ತು ಶುಷ್ಕ ವಾತಾವರಣದಿಂದ ತೊಗರಿ ಬೆಳೆಯಲ್ಲಿ ನೆಟೆ ರೋಗ ಕಾಣಿಸಿಕೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರ ನೆರವಿಗೆ ಸರ್ಕಾರ ಧಾವಿಸಿದ್ದು, ವಿಶೇಷ ಪ್ರಕರಣವೆಂದು ತೀರ್ಮಾನಿಸಿ ಪರಿಹಾರ ಘೋಷಣೆ ಮಾಡಲಾಗಿದೆ.