ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳು ಸಿಬ್ಬಂದಿಯನ್ನು ಕಚೇರಿಗಿಂತ ಮನೆಯಲ್ಲಿ ದುಡಿಸಿದ್ದೇ ಹೆಚ್ಚು.
ಹೆಚ್ಚೂ ಕಡಿಮೆ 2020 ರ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಿಂದ ಶುರುವಾಗಿರುವ ಮನೆಗೆಲಸ (ಡಬ್ಲ್ಯುಎಫ್ಎಚ್) ಇನ್ನೂ ಮುಗಿದಿಲ್ಲ. ಇದೇ ಪರಿಪಾಠವನ್ನು ಈಗಾಗಲೇ ಅನೇಕ ಕಂಪನಿಗಳು ಮುಂದುವರಿಸಿವೆ.
ಕೆಲ ಸಣ್ಣ ಪ್ರಮಾಣದ ಕಂಪನಿಗಳು ಕಟ್ಟಡದ ಬಾಡಿಗೆ, ವಿದ್ಯುತ್, ನೀರಿನ ಶುಲ್ಕ, ಕಟ್ಟಡ ನಿರ್ವಹಣಾ ವೆಚ್ಚ ಉಳಿಸುವುದಕ್ಕೆಂದೇ ಮನೆಯಿಂದಲೇ ಕರ್ತವ್ಯ ನಿರ್ಹಹಿಸುವ ಅಭ್ಯಾಸದ ಮೊರೆ ಹೋಗಿವೆ. ಬಹುತೇಕ ಶೇ.85 ರಷ್ಟು ಸಿಬ್ಬಂದಿ ಮನೆಯಿಂದ ಕೆಲಸ ಮಾಡುತ್ತಿದ್ದು, ಇನ್ನುಳಿದವರು ಅನಿವಾರ್ಯ ಕಾರಣಗಳಿಂದ ಕಚೇರಿಗೆ ಹೋಗುತ್ತಿದ್ದಾರೆ.
ಇದೀಗ ಟೆಲಿಕಮ್ಯುನಿಕೇಶನ್ ಇಲಾಖೆಯೇ ಅಧಿಕೃತ ಆದೇಶ ಹೊರಡಿಸಿದ್ದು, ಬಹುರಾಷ್ಟ್ರೀಯ ಕಂಪನಿ (ಬಿಪಿಒ) ಹಾಗೂ ಸಾಫ್ಟ್‌ವೇರ್ ಸಂಸ್ಥೆಗಳು ತಮ್ಮ ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ಮಾಡಲು ಸೂಚಿಸುವಂತೆ ಶಿಫಾರಸು ಮಾಡಿದೆ. 2020 ರ ಡಿಸೆಂಬರ್ ತಿಂಗಳವರೆಗೆ ಇದೇ ಪದ್ಧತಿ ಮುಂದುವರಿಯಲಿ ಎಂದೂ ಹೇಳಿದೆ.