ನವದೆಹಲಿ: 31 ಜನವರಿ, 2022 ರವರೆಗೆ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ.
ಭಾರತಕ್ಕೆ ಬರುವ ಮತ್ತು ಭಾರತದಿಂದ ತೆರಳುವ ನಿಗದಿತ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ಅಮಾನತನ್ನು ಕೇಂದ್ರ ಸರ್ಕಾರ 31 ಜನವರಿ 2022 ರವರೆಗೆ ವಿಸ್ತರಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ಗುರುವಾರ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ಆದಾಗ್ಯೂ, ಈ ನಿರ್ಬಂಧವು DGCA ಯಿಂದ ನಿರ್ದಿಷ್ಟವಾಗಿ ಅನುಮೋದಿಸಲಾದ ಅಂತಾರಾಷ್ಟ್ರೀಯ ಎಲ್ಲಾ-ಸರಕು ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಅನ್ವಯಿಸುವುದಿಲ್ಲ. ಅಂತರಾಷ್ಟ್ರೀಯ ನಿಗದಿತ ವಿಮಾನಗಳನ್ನು ಕೇಸ್-ಟು-ಕೇಸ್ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ಸಂಚರಿಸಲು ಅನುಮೋದನೆಯೊಂದಿಗೆ ಅವಕಾಶ ಇದೆ.
ಮಾರ್ಚ್ 2020 ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಂತರ ಮೊದಲ ಬಾರಿ ನಿಗದಿತ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈ ವರ್ಷ ನವೆಂಬರ್‌ನಲ್ಲಿ, ಡಿಸೆಂಬರ್ 15 ರಿಂದ ನಿಗದಿತ ಅಂತರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸಲು ಭಾರತ ಸರ್ಕಾರ ನಿರ್ಧರಿಸಿತ್ತು, ನಂತರ ಕೊರೋನಾ ವೈರಸ್ ರೂಪಾಂತರ ಒಮಿಕ್ರಾನ್ ಬಗ್ಗೆ ಹೆಚ್ಚುತ್ತಿರುವ ಆತಂಕದ ಕಾರಣದಿಂದಾಗಿ ಅದನ್ನು ರದ್ದುಗೊಳಿಸಲಾಯಿತು.
ವಿಮಾನಯಾನ ಸಚಿವ ಸಿಂಧಿಯಾ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ವಿಮಾನಗಳನ್ನು ಪುನರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.