ಬೆಂಗಳೂರು: ಸರ್ಕಾರಿ ನೌಕರರ ವಿಮೆ ಸೌಲಭ್ಯ 60 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ನೌಕರರ ವಿಮಾ ಸೌಲಭ್ಯದ ಅವಧಿ ಪೂರೈಕೆಯನ್ನು 55 ವರ್ಷದಿಂದ 60 ವರ್ಷಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರಿ ವಿಮಾ ಇಲಾಖೆ ಕ್ರಮ ಕೈಗೊಂಡಿದೆ. ಈ ಕುರಿತಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದು ಸೂಕ್ತ ಆದೇಶ ಹೊರಡಿಸಲು ಕೋರಿದೆ.
ಈ ಮೊದಲು ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 55 ವರ್ಷ ಇತ್ತು. 55 ವರ್ಷದವರಗೆ ಮಾತ್ರ ವಿಮೆ ಲಭ್ಯವಾಗುತ್ತಿತ್ತು.
1959 ರಿಂದ 55 ವರ್ಷದ ವಯಸ್ಸಿನವರೆಗೆ ವಿಮೆ ಸೌಲಭ್ಯ ನೀಡಲಾಗುತ್ತಿತ್ತು. 1984ರಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಕ್ಕೆ ಹೆಚ್ಚಳ ಮಾಡಲಾಯಿತು. 2008ರಲ್ಲಿ 60 ವರ್ಷಕ್ಕೆ ಹೆಚ್ಚಳ ಮಾಡಲಾಯಿತು.
ಆದರೂ, ವಿಮೆ ಸೌಲಭ್ಯ 55 ವರ್ಷದವರೆಗೆ ಮಾತ್ರ ನೀಡಲಾಗುತ್ತಿದ್ದು, 5 ವರ್ಷ ನೌಕರರು ವಿಮೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಐದು ವರ್ಷದ ಅವಧಿಯಲ್ಲಿ ನೌಕರರ ಮೃತಪಟ್ಟ ಸಂದರ್ಭದಲ್ಲಿ ಅವಲಂಬಿತ ಕುಟುಂಬದವರಿಗೆ ವಿಮೆ ಸೌಲಭ್ಯ ಲಭ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ 55 ನೇ ವಯಸ್ಸಿನಿಂದ 60 ವರ್ಷದವರೆಗೆ ವಿಮೆ ಸೌಲಭ್ಯದ ಅವಧಿ ಹೆಚ್ಚಳ ಮಾಡಲಾಗಿದೆ.