ನವದೆಹಲಿ: ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳದಿರಲು ತೀರ್ಮಾನಿಸಿದೆ. ಅಲ್ಲದೇ ಬಜೆಟ್ನಲ್ಲಿ ಘೋಷಿಸಲಾಗಿದ್ದ ಕಾರ್ಯಕ್ರಮಗಳನ್ನು ಕೂಡ ರದ್ದು ಮಾಡಲು ನಿರ್ಧರಿಸಲಾಗಿದೆ.
ಕೊರೋನಾ ಸಂಕಷ್ಟದಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು ಇಂತಹ ಸಂದರ್ಭದಲ್ಲಿ ಸಂಪನ್ಮೂಲವನ್ನು ಈಗಲೇ ಖರ್ಚು ಮಾಡಿದರೆ ಮುಂದೆ ತೀವ್ರತರ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಹೊಸ ಯೋಜನೆಗಳನ್ನು ಆರಂಭಿಸದಿರಲು ತೀರ್ಮಾನಿಸಲಾಗಿದೆ.
ಹಣಕಾಸು ಸಚಿವಾಲಯದ ವತಿಯಿಂದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಈ ಕುರಿತಾಗಿ ಸೂಚನೆ ನೀಡಲಾಗಿದೆ. ಅಲ್ಲದೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಮೋದನೆಗೊಂಡ ಯೋಜನೆಗಳನ್ನು ಕೂಡ ಮುಂದಿನ ಮಾರ್ಚ್ 31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಅಮಾನತಿನಲ್ಲಿ ಇಡಲಾಗಿದೆ.
ಕೊರನಾ ಸಂಕಷ್ಟ ಹಿನ್ನೆಲೆಯಲ್ಲಿ ಜಾರಿಗೆ ತಂದ ಪ್ರಧಾನಮಂತ್ರಿ ಗೌರಿ ಕಲ್ಯಾಣ್ ಪ್ಯಾಕೇಜ್ ಯೋಜನೆ, ಆತ್ಮ ನಿರ್ಭರ್ ಭಾರತ ಅಭಿಯಾನ ಪ್ಯಾಕೇಜ್ ಹೊರತುಪಡಿಸಿ ಬೇರೆ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆಯಾಗುವುದಿಲ್ಲ ಎನ್ನಲಾಗಿದೆ.
ಒಂದು ವರ್ಷ ಯಾವುದೇ ಹೊಸ ಯೋಜನೆ ಕೈಗೊಳ್ಳುವುದಿಲ್ಲ. 2020 -21 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಲಾದ ಕೆಲವು ಯೋಜನೆಗಳನ್ನು ಕೂಡ ಅನುಷ್ಠಾನಗೊಳಿಸುವುದಿಲ್ಲ. ಕೇಂದ್ರ ಸರ್ಕಾರ ಘೋಷಿತ ಯೋಜನೆಗಳನ್ನು ರದ್ದು ಮಾಡುವುದರಿಂದ ವಿವಿಧ ವಲಯಗಳಿಗೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.