ನವದೆಹಲಿ: ತೆರಿಗೆ ವಂಚನೆ ತಡೆಗೆ ಈಗಾಗಲೇ ಅನೇಕ ಕ್ರಮಕೈಗೊಂಡಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ʼಚಿನ್ನ ಕ್ಷಮಾದಾನʼ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.
ತೆರಿಗೆ ವಂಚನೆ ತಡೆಯಲು ಮತ್ತು ಚಿನ್ನದ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಕೇಂದ್ರ ಹಣಕಾಸು ಸಚಿವಾಲಯ ಅಕ್ರಮ ಚಿನ್ನ ಹೊಂದಿರುವವರಿಗೆ ʼಕ್ಷಮಾದಾನʼ ಯೋಜನೆ ಜಾರಿಗೆ ತರಲಿದೆ ಎಂದು ಹೇಳಲಾಗಿದೆ.
ಈ ಕುರಿತಾಗಿ ಪ್ರಧಾನಿ ಮೋದಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೆಕ್ಕವಿಲ್ಲದಷ್ಟು ಚಿನ್ನವನ್ನು ಅಕ್ರಮವಾಗಿ ಹೊಂದಿದವರಿಗೆ ಕ್ಷಮಾದಾನ ಯೋಜನೆಯಡಿ ತೆರಿಗೆ ಪಾವತಿಸಲು ಸುಂಕ ಮತ್ತು ದಂಡ ಪಾವತಿಸಲು ಅವಕಾಶ ಮಾಡಿಕೊಡುವ ಯೋಜನೆ ಜಾರಿಗೆ ತರುವ ಕುರಿತಾಗಿ ಚರ್ಚೆ ನಡೆದಿದೆ. ಇದಿನ್ನೂ ಆರಂಭಿಕ ಹಂತದಲ್ಲಿ ಇದೆ ಎಂದು ಹೇಳಲಾಗಿದೆ.
ಚಿನ್ನದ ಕ್ಷಮಾದಾನ ಯೋಜನೆಯಡಿ ತಮ್ಮಲ್ಲಿರುವ ಚಿನ್ನದ ಸಂಗ್ರಹವನ್ನು ಘೋಷಿಸುವ ಗ್ರಾಹಕರು ಕಾನೂನು ಬದ್ಧಗೊಳಿಸಲಾದ ಕೆಲ ಪ್ರಮಾಣದ ಚಿನ್ನವನ್ನು ಕೆಲವು ವರ್ಷಗಳವರೆಗೆ ಸರ್ಕಾರಕ್ಕೆ ಜಮಾ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ ಈ ಕುರಿತ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಕೆಲವೊಂದು ಬದಲಾವಣೆಗಳೊಂದಿಗೆ ಜಾರಿಗೆ ಬರುವ ಸಾಧ್ಯತೆ ಇದೆ.