
ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಆದ್ಯತಾ ವಲಯದ ಸಾಲ ಸೌಲಭ್ಯ ವ್ಯಾಪ್ತಿಗೆ ತರುವ ಪ್ರಸ್ತಾಪದ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಸುತ್ತಿದೆ.
ಎಲೆಕ್ಟ್ರಿಕ್ ವಾಹನಗಳನ್ನು(ಇವಿ) ಆದ್ಯತೆಯ ವಲಯದ ಸಾಲ(ಪಿಎಸ್‌ಎಲ್) ವಿಭಾಗದಲ್ಲಿ ಸೇರಿಸುವ ಪ್ರಸ್ತಾಪ ಪರಿಗಣಿಸಿದ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನೊಂದಿಗೆ ಸಮಾಲೋಚಿಸಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಎಲೆಕ್ಟ್ರಿಕ್ ವಾಹನವನ್ನು ಆದ್ಯತಾ ವಲಯಕ್ಕೆ ಸೇರಿಸಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಬ್ಯಾಂಕುಗಳಿಗೆ ಆದ್ಯತಾ ವಲಯದ ಸಾಲದ ಅಗತ್ಯ ಮರು ಹೊಂದಿಸುವ ಬಗ್ಗೆ ಗಮನಹರಿಸಲಾಗುವುದು ಎಂದು ಹೇಳಿದ್ದಾರೆ.
ಆದ್ಯತಾ ವಲಯದ ವ್ಯಾಪ್ತಿಗೆ ಎಲೆಕ್ಟ್ರಿಕ್ ವಾಹನಗಳನ್ನು ತರುವ ಬಗ್ಗೆ ಆರ್‌ಬಿಐ ಜೊತೆಗೆ ಸಮಾಲೋಚನೆ ನಡೆಸಲಾಗುವುದು. ಆರ್.ಬಿ.ಐ. ಮಾರ್ಗಸೂಚಿ ಅನ್ವಯ ಬ್ಯಾಂಕುಗಳು ತಮ್ಮ ಒಟ್ಟು ಸಾಲದಲ್ಲಿ ಶೇಕಡ 40ರಷ್ಟು ಸಾಲವನ್ನು ಆದ್ಯತಾ ವಲಯಕ್ಕೆ ನೀಡಬೇಕಿದೆ. ಪ್ರಸ್ತುತ ಕೃಷಿ, ಸಣ್ಣ ಕೈಗಾರಿಕೆ, ರಫ್ತು ಸಾಲ, ಶಿಕ್ಷಣ ಸಾಲ, ಗೃಹ ಸಾಲ, ಸಾಮಾಜಿಕ ಮೂಲ ಸೌಕರ್ಯ, ನವೀಕರಿಸಬಲ್ಲ ಇಂಧನಕ್ಕೆ ಆದ್ಯತಾ ವಲಯದಡಿ ಸಾಲ ನೀಡಲಾಗುತ್ತದೆ.
ಎಲೆಕ್ಟ್ರಿಕ್ ವಾಹನಗಳನ್ನೂ ಆದ್ಯತಾ ವಲಯದ ವ್ಯಾಪ್ತಿಗೆ ತರುವುದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಆರ್.ಬಿ.ಐ. ಜೊತೆಗೆ ಸಮಾಲೋಚನೆ ನಡೆಸಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.