ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಲು ಚಿಂತನೆ ನಡೆಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 8.5 ರೂ.ನಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ.
ಇಂಧನ ಮೇಲಿನ ತೆರಿಗೆಯಿಂದ ಬರುವ ಆದಾಯದ ಗುರಿಯ ಮೇಲೆ ಪರಿಣಾಮ ಬೀರದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 8.5 ರೂಪಾಯಿಯಷ್ಟು ಕಡಿತಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ಹೇಳಲಾಗಿದ್ದು, ಇದನ್ನು ಪರಿಗಣಿಸಿ ಅಬಕಾರಿ ಸುಂಕ ಕಡಿತಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ದೇಶಾದ್ಯಂತ ಇಂಧನ ಬೆಲೆ ಇಳಿಕೆಗೆ ಒತ್ತಾಯ ಕೇಳಿ ಬಂದಿದೆ. ಹೀಗಾಗಿ 2021 ರ ಏಪ್ರಿಲ್ 1 ಅಥವಾ ಅದಕ್ಕಿಂತ ಮೊದಲೇ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಚರ್ಚೆ ನಡೆದಿದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಸರ್ಕಾರದ ಆದಾಯದ ಗುರಿಯ ಲೆಕ್ಕಾಚಾರ, ಅಬಕಾರಿ ಸುಂಕ ಸಂಗ್ರಹ ಮೊದಲಾದವುಗಳ ಕುರಿತಾಗಿ ಚರ್ಚೆ ನಡೆಸಲಾಗಿದೆ. 2020 ರ ಮಾರ್ಚ್ ಮತ್ತು ಏಪ್ರಿಲ್ ನಡುವೆ ಲೀಟರ್ ಪೆಟ್ರೋಲ್ 13 ರೂ. ಮತ್ತು ಡೀಸೆಲ್ ಗೆ 16 ರೂ. ನಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಲೀಟರ್ ಡೀಸೆಲ್ ಗೆ 31.8 ರೂಪಾಯಿ ಮತ್ತು ಪೆಟ್ರೋಲ್ ಗೆ 32.9 ರೂಪಾಯಿ ಅಬಕಾರಿ ಸುಂಕ ಇದ್ದು, ಇದರಲ್ಲಿ ಸರ್ಕಾರದ ಆದಾಯಕ್ಕೆ ತೊಂದರೆಯಾಗದಂತೆ 8.5 ರೂಪಾಯಿ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.