ನವದೆಹಲಿ: ಬ್ಯಾಂಕ್ ನಲ್ಲಿ ಕ್ಯಾಶ್ ವ್ಯವಹಾರಕ್ಕೆ ಭಾರಿ ಸೇವಾ ಶುಲ್ಕವನ್ನು ರದ್ದುಪಡಿಸಲಾಗಿದೆ. ಜನಾಕ್ರೋಶಕ್ಕೆ ಮಣಿದ ಬ್ಯಾಂಕ್ ಆಫ್ ಬರೋಡಾ ಸೇವಾ ಶುಲ್ಕ ರದ್ದುಮಾಡಿದೆ. ಸೇವಾ ಶುಲ್ಕ ಹೆಚ್ಚಳದ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಕೂಡ ಸ್ಪಷ್ಟಪಡಿಸಿದೆ.
ಬ್ಯಾಂಕುಗಳಲ್ಲಿ ಉಚಿತವಾಗಿ ನಗದು ವ್ಯವಹಾರ ನಡೆಸಲು ಮಿತಿ ಇಳಿಕೆ ಮಾಡಿ, ನಂತರದ ಪ್ರತಿ ವ್ಯವಹಾರಗಳಿಗೆ ಹೆಚ್ಚಿನ ಸೇವಾ ಶುಲ್ಕ ವಿಧಿಸುವ ನಿರ್ಧಾರವನ್ನು ಬ್ಯಾಂಕ್ ಆಫ್ ಬರೋಡಾ ಕೈಬಿಟ್ಟಿದೆ. ಹೆಚ್ಚಿನ ಸೇವಾ ಶುಲ್ಕ ವಿಧಿಸುವ ಬ್ಯಾಂಕ್ ಗಳ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಉಚಿತ ವ್ಯವಹಾರದ ಮಿತಿಮೀರಿದ ನಂತರ ಹೆಚ್ಚಿನ ಸೇವಾ ಶುಲ್ಕ ವಿಧಿಸಲು ಕ್ರಮಕೈಗೊಳ್ಳಲಾಗಿದ್ದು ಗ್ರಾಹಕರು ಇದರಿಂದ ಕಂಗಾಲಾಗಿದ್ದರು.
ಇನ್ನು ಮುಂದೆ ಬ್ಯಾಂಕ್ ಖಾತೆಗೆ ನಗದು ಜಮೆ ಮಾಡಲು ಕೂಡ ಶುಲ್ಕ ಪಾವತಿಸಬೇಕಿದೆ. ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ನೆಪದಲ್ಲಿ ಗ್ರಾಹಕರಿಗೆ ಬರೆ ಎಳೆಯಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಉಳಿತಾಯ, ಚಾಲ್ತಿ ಖಾತೆಗೂ ನಿಯಮ ಅನ್ವಯವಾಗಲಿದೆ. ಖಾತೆಗೆ ಹಣ ಕಟ್ಟಿದ್ದರೂ ಕೂಡ ಶುಲ್ಕ ಪಾವತಿಸಬೇಕಿದೆ. ಬ್ಯಾಂಕುಗಳು ನಿಗದಿಪಡಿಸಿದ 3 ಇಲ್ಲವೇ 5 ವ್ಯವಹಾರಗಳು ಉಚಿತವಾಗಿದ್ದು, ಬಳಿಕ ಹಣ ಪಾವತಿಸಲು ಕೂಡ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನಲಾಗಿತ್ತು.
ಬ್ಯಾಂಕ್ ಆಫ್ ಬರೋಡಾ ಮೆಟ್ರೋ ನಗರಗಳಲ್ಲಿ ಉಳಿತಾಯ ಖಾತೆದಾರರಿಗೆ ಪ್ರತಿ ತಿಂಗಳು ಮೂರು ಸಲ ಉಚಿತವಾಗಿ ನಗದು ಠೇವಣಿ ಇಡಲು ಅವಕಾಶ ಕಲ್ಪಿಸಿದ್ದು, ನಂತರ ಪ್ರತಿ ವರ್ಗಾವಣೆಗೆ 50 ರೂಪಾಯಿ ಶುಲ್ಕ ಪಾವತಿಸಬೇಕು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಹಿರಿಯ ನಾಗರಿಕರಿಗೆ 40 ರೂ. ಶುಲ್ಕ ನಿಗದಿ ಮಾಡಿದೆ.
ಜನ್ ಧನ್ ಖಾತೆದಾರರಿಗೆ ಮತ್ತು ಬೇಸಿಕ್ ಸೇವಿಂಗ್ಸ್ ಖಾತೆ ಹೊಂದಿದವರಿಗೆ ಶುಲ್ಕ ಇರುವುದಿಲ್ಲ. ಅಕ್ರಮಗಳಿಗೆ ಕಡಿವಾಣ ಹಾಕಲು, ಆನ್ಲೈನ್ ವ್ಯವಹಾರಕ್ಕೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿತ್ತು.
ಬ್ಯಾಂಕ್ ಆಫ್ ಬರೋಡಾ ಜೊತೆಗೆ ಕೆಲವು ಬ್ಯಾಂಕುಗಳಲ್ಲಿ ಕೂಡ ಇದೇ ಮಾದರಿ ಅನುಸರಿಸಲು ನಿರ್ಧರಿಸಿದ್ದು ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ನಿಗದಿತ ಮೀರಿದ ನಂತರ ಸೇವಾ ಶುಲ್ಕ ಹೆಚ್ಚಳದ ಪ್ರಸ್ತಾಪವಿಲ್ಲ ಎಂದು ತಿಳಿಸಿದೆ.