ಎರಡು ಕೋಟಿ ರೂ.ಗಳ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ಸಾಲ ಮರುಪಾವತಿ ಮಾಡಲು ಇನ್ನಷ್ಟು ಸಮಯಾವಕಾಶ ಪಡೆದಿರುವ ಸಾಲಗಾರರಿಗೆ ಅನುಕೂಲವಾಗಲಿರುವ ಈ ನಡೆಯ ಕುರಿತಂತೆ ಕೇಂದ್ರ ಸರ್ಕಾರ ಈ ಸಂಬಂಧ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ.
ಆರ್‌ಬಿಐ ನಿಯಂತ್ರಿತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಗೃಹ ಸಾಲ ಕಂಪನಿಗಳು, ಸಣ್ಣ ಸಾಲ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು, ನಿರ್ದಿಷ್ಟ ಖಾತೆಗಳ ಮೇಲೆ ಸಾಲ ಪಡೆದಿರುವ ಸಾಲಗಾರರಿಗೆ ಸರಳ ಬಡ್ಡಿಯ ವ್ಯತ್ಯಾಸವನ್ನು ಎಕ್ಸ್‌ಗ್ರೇಷಿಯಾ ಪಾವತಿ ರೂಪದಲ್ಲಿ ಅನುಮೋದಿಸಲು ಸಹಮತ ಸೂಚಿಸಿದೆ.
ಆರು ತಿಂಗಳ ಮೊರಾಟಾರಿಂ ಅವಧಿಯಲ್ಲಿ ಸಣ್ಣ ಸಾಲಗಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಈ ಮುನ್ನ ತಿಳಿಸಿತ್ತು. ತನ್ನ ಈ ನಡೆಯಿಂದ ಕೇಂದ್ರಕ್ಕೆ ಹೆಚ್ಚುವರಿಯಾಗಿ 6,500 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದು ಅನೇಕ ವರದಿಗಳು ತಿಳಿಸಿದ್ದವು.
ಮಾರ್ಚ್ 1 – ಆಗಸ್ಟ್ 31, 2020ರ ಅವಧಿಗೆ, ನಿರ್ದಿಷ್ಟ ಸಾಲದ ಖಾತೆಗಳನ್ನು ಹೊಂದಿರುವ ಸಾಲಗಾರರು ಈ ಯೋಜನೆಯ ಫಲಾನುಭವಿಗಳಾಗಬಹುದು ಎಂದು ವಿತ್ತೀಯ ಸೇವೆಗಳ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿ ತಿಳಿಸುತ್ತಿದೆ. ಸಾಲ ಮರುಪಾವತಿ ಮೇಲೆ ನೀಡಲಾದ ಸಡಿಲಿಕೆಯನ್ನು ಬಳಸಿಕೊಂಡಿರುವ/ಕೊಳ್ಳದೇ ಇರುವ ಎಲ್ಲರೂ ಸಹ ಈ ಸ್ಕೀಂನ ಫಲಾನುಭವಿಗಳಾಗಲಿದ್ದಾರೆ.
ಫೆಬ್ರವರಿ 29ಕ್ಕೆ ಅನ್ವಯವಾಗುವಂತೆ, ಮೇಲ್ಕಂಡ ಹಣಕಾಸು ಸಂಸ್ಥೆಗಳಲ್ಲಿ ಸ್ಯಾಂಕ್ಷನ್ ಮಾಡಲಾದ ಮಿತಿಗಳಲ್ಲಿ, 2 ಕೋಟಿ ರೂ.ಗಳನ್ನು ಮೀರಿರದ, ಸಾಲ ಹೊಂದಿರುವವರಿಗೆ ನವೆಂಬರ್ 5ರಿಂದ ಅನ್ವಯವಾಗುವಂತೆ ಈ ಯೋಜನೆ ಅನುಷ್ಠಾನವಾಗಲಿದೆ. ಈ ಯೋಜನೆಯಡಿ ಗೃಹ, ಶಿಕ್ಷಣ, MSME, ಆಟೋಮೊಬೈಲ್, ವೈಯಕ್ತಿಕ, ಗ್ರಾಹಕ ಬಳಕೆ ವಸ್ತುಗಳು, ಖರೀದಿ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಸಾಲಗಳು ಸೇರಿಕೊಂಡಿವೆ.