ನವದೆಹಲಿ: ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಕಾಯ್ದೆ ರೂಪಿಸಲಾಗಿದೆ. ಈ ಮೂಲಕ ಮನೆ ಬಾಡಿಗೆಗೆ ಉದ್ಯಮದ ಸ್ವರೂಪ ನೀಡಲಾಗಿದೆ. ಮಾದರಿ ಬಾಡಿಗೆ ಕಾಯ್ದೆ ರೂಪಿಸಿದ್ದು, ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ.
ಬಾಡಿಗೆ ಮನೆ ಮಾಲೀಕರು ಇನ್ನು ಮುಂದೆ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡ ಪಡೆಯಬೇಕಿದೆ. ಬಾಡಿಗೆ ಪ್ರಾಧಿಕಾರ ರಚನೆ ಮಾಡಲಿದ್ದು, ಮನೆ ಮತ್ತು ವಾಣಿಜ್ಯ ಕಟ್ಟಡ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರ ಎಲ್ಲಾ ವ್ಯಾಜ್ಯಗಳ ಇತ್ಯರ್ಥಕ್ಕೆ ವ್ಯವಸ್ಥೆ ಕಲ್ಪಿಸುತ್ತದೆ.
ಮಾಸಿಕ ಮನೆ ಬಾಡಿಗೆ ಮೊತ್ತದ ಎರಡು ತಿಂಗಳ ಹಣವನ್ನು ಮಾತ್ರ ಭದ್ರತಾ ಠೇವಣಿಯಾಗಿ ಅಡ್ವಾನ್ಸ್ ಪಡೆಯಬಹುದು. ವಾಣಿಜ್ಯ ಕಟ್ಟಡಗಳಿಗೆ ಬಾಡಿಗೆ ಮೊತ್ತದ 6 ತಿಂಗಳ ಹಣ ಮಾತ್ರ ಅಡ್ವಾನ್ಸ್ ಪಡೆಯಬಹುದು. ಬಾಡಿಗೆ ಒಪ್ಪಂದ ಮುಗಿದ ನಂತರ ಮನೆ ಖಾಲಿ ಮಾಡದಿದ್ದರೆ ಮನೆ ಮಾಲೀಕರು 2 ತಿಂಗಳ ಅವಧಿಗೆ ಬಾಡಿಗೆ ಹೆಚ್ಚಿಸಬಹುದು. ಎರಡು ತಿಂಗಳ ನಂತರ ಖಾಲಿ ಮಾಡದಿದ್ದರೆ ನಾಲ್ಕು ಪಟ್ಟು ಬಾಡಿಗೆ ಹೆಚ್ಚಳ ಮಾಡಬಹುದು. ಬಾಡಿಗೆದಾರನ ಮನೆಗೆ ಮಾಲೀಕ ಏಕಾಏಕಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ.