ನವದೆಹಲಿ: ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರದ ವತಿಯಿಂದ ಖುಷಿ ಸುದ್ದಿ ನೀಡಲಾಗಿದೆ. ತಮ್ಮದೇ ಹೊಸ ಕಂಪನಿ ತೆರೆಯುವುದನ್ನು ಕೇಂದ್ರ ಸರ್ಕಾರ ಈಗ ಬಲು ಸುಲಭಗೊಳಿಸಿದೆ. ಇದಕ್ಕಾಗಿ ಸ್ವಯಂ ಘೋಷಣೆಯ ಆಧಾರದ ಮೇಲೆ ಹೊಸ ಕಂಪನಿಯ ಆನ್‌ಲೈನ್ ನೋಂದಣಿಗೆ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಶುರು ಮಾಡ್ತಿದೆ.
ಜುಲೈ 1 ರಿಂದ ಈ ನಿಯಮಗಳು ಜಾರಿಗೆ ಬರಲಿದ್ದು, ಹೊಸ ನಿಯಮಗಳ ಪ್ರಕಾರ, ಕಂಪನಿಯನ್ನು ಪ್ರಾರಂಭಿಸಲು ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಕೇವಲ ಆಧಾರ್ ಸಂಖ್ಯೆಯನ್ನು ನೀಡಬೇಕು. ಇತರ ಎಲ್ಲಾ ಮಾಹಿತಿಯನ್ನು ಸ್ವಯಂ ಘೋಷಣೆಯ ಆಧಾರದ ಮೇಲೆ ನೀಡಬೇಕಾಗುತ್ತದೆ.
ಆದಾಯ ತೆರಿಗೆ ಮತ್ತು ಜಿಎಸ್‌ಟಿ ವ್ಯವಸ್ಥೆಯನ್ನು ಪರಸ್ಪರ ಜೋಡಿಸುವ ಕಾರಣ ಹೊಸ ವ್ಯವಸ್ಥೆ ಸಾಧ್ಯವಾಗಿದೆ. ಎಲ್ಲಾ ಮಾಹಿತಿಯನ್ನು ಪಾನ್ ಸಂಖ್ಯೆ ಅಥವಾ ಜಿಎಸ್‌ಟಿಐಎನ್‌ನಲ್ಲಿ ನೀಡಿರುವ ವಿವರಗಳ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ.
ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪೋರ್ಟಲ್ ಮೂಲಕ ಪೂರ್ಣಗೊಳಿಸಬಹುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪೋರ್ಟಲ್‌ನ ಮಾಹಿತಿಯನ್ನು 1 ಜುಲೈ 2020 ರ ಮೊದಲು ನೀಡಲಾಗುವುದು. 1 ಜೂನ್ 2020 ರಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹೂಡಿಕೆ ಮತ್ತು ವಹಿವಾಟಿನ ಆಧಾರದ ಮೇಲೆ ಎಂಎಸ್‌ಎಂಇ ವರ್ಗೀಕರಣದ ಹೊಸ ಮಾನದಂಡಗಳನ್ನು ಸೂಚಿಸಿದೆ. ಈ ನಿಯಮಗಳು 1 ಜುಲೈ 2020 ರಿಂದ ಜಾರಿಗೆ ಬರಲಿವೆ.