ನವದೆಹಲಿ: ಅಡುಗೆ ಎಣ್ಣೆ ಆಮದು ಸುಂಕ ವಿನಾಯಿತಿಯನ್ನು 2024ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಸೋಯಾ ಎಣ್ಣೆ, ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಆಮದು ಸುಂಕಕ್ಕೆ 2023ರ ಮಾರ್ಚ್ 31ರವರೆಗೆ ವಿನಾಯಿತಿ ನೀಡಲಾಗಿತ್ತು. ಅದನ್ನು ವಿಸ್ತರಿಸಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ದಾಖಲೆಯ ಪ್ರಮಾಣಕ್ಕೆ ಏರಿಕೆ ಕಂಡಿದ್ದ ಕಾರಣ 2021 ರ ಮಧ್ಯ ಭಾಗದಿಂದ ಆಮದು ಸುಂಕ ಕಡಿಮೆ ಮಾಡಲಾಗಿತ್ತು. ಈ ವಿನಾಯಿತಿ 2023 ರ ಮಾರ್ಚ್ 31ಕ್ಕೆ ಕೊನೆಯಾಗಲಿದೆ. ಹೀಗಾಗಿ, ಇನ್ನೂ ಒಂದು ವರ್ಷ ಪ್ರಯೋಜನ ವಿಸ್ತರಿಸಲು ಕೇಂದ್ರ ಸರ್ಕಾರ ಗುರುವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದೆ.
ತಾಳೆ ಎಣ್ಣೆ, ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಆಮದು ಸುಂಕಕ್ಕೆ ನೀಡಲಾಗಿರುವ ವಿನಾಯಿತಿ 2024ರ ಮಾರ್ಚ್ 31ರವರೆಗೂ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2021ರ ಆರಂಭದಲ್ಲಿ ಕಚ್ಚಾ ತಾಳೆ ಎಣ್ಣೆ ಆಮದು ಮೇಲೆ ಶೇಕಡ 35.75 ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಅದನ್ನು ಶೇಕಡ 5.5ಕ್ಕೆ ಕಡಿತ ಮಾಡಲಾಗಿತ್ತು. ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಅರ್ಜೆಂಟೇನಾ, ಬ್ರೆಜಿಲ್, ಉಕ್ರೇನ್, ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ತಾಳೆ ಎಣ್ಣೆಯನ್ನು ಇಂಡೋನೇಷ್ಯಾ, ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುವುದು. ವಿಶ್ವದ ಅತಿದೊಡ್ಡ ತರಕಾರಿ ತೈಲಗಳ ಆಮದುದಾರ ಭಾರತ ತನ್ನ ಖಾದ್ಯ ತೈಲದ ಮೂರನೇ ಎರಡರಷ್ಟು ಹೆಚ್ಚು ಆಮದು ಮಾಡಿಕೊಳ್ಳುತ್ತದೆ.