ನವದೆಹಲಿ: ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಖಾರಿಫ್ ಋತುವಿನಲ್ಲಿ ಕಡಿಮೆ ಇಳುವರಿ, ರಫ್ತು ಇತರೆ ಕಾರಣದಿಂದ ಅಕ್ಕಿ ಬೆಲೆ ಏರಿಕೆ ಮುಂದುವರೆಯಬಹುದು ಎಂದು ಹೇಳಲಾಗಿದೆ.
ರಫ್ತು ನೀತಿಯಲ್ಲಿ ಬದಲಾವಣೆ
ಆಹಾರ ಸಚಿವಾಲಯ ನೀಡಿದ ಮಾಹಿತಿಯಲ್ಲಿ, ಭಾರತದ ಅಕ್ಕಿ ರಫ್ತು ನೀತಿಯಲ್ಲಿ ಇತ್ತೀಚಿನ ತಿದ್ದುಪಡಿಗಳ ಹಿಂದಿನ ವಿವರವಾದ ಕಾರಣಗಳನ್ನು ವಿವರಿಸಲಾಗಿದೆ. ಭಾರತದ ಅಕ್ಕಿ ರಫ್ತು ನಿಯಮಗಳಲ್ಲಿ ಇತ್ತೀಚಿನ ಬದಲಾವಣೆಗಳು ರಫ್ತಿಗೆ ಲಭ್ಯತೆಯನ್ನು ಕಡಿಮೆ ಮಾಡದೆ “ದೇಶೀಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಿದೆ” ಎಂದು ಸಚಿವಾಲಯ ಹೇಳಿದೆ.
ಒಡೆದ(ನುಚ್ಚು) ಅಕ್ಕಿ ರಫ್ತು ನಿಷೇಧ
ಸೆಪ್ಟೆಂಬರ್ ಆರಂಭದಲ್ಲಿ, ಒಡೆದ ಅಕ್ಕಿಯ ರಫ್ತನ್ನು ಸರ್ಕಾರ ನಿಷೇಧಿಸಿದೆ. ಬಾಸ್ಮತಿ ಅಲ್ಲದ ಅಕ್ಕಿಗೆ 20 ಪ್ರತಿಶತ ರಫ್ತು ಸುಂಕವನ್ನು ವಿಧಿಸಿದೆ. ಆಹಾರ ಸಚಿವಾಲಯವು ಫ್ಯಾಕ್ಟ್ ಶೀಟ್‌ನಲ್ಲಿ, ದೇಶೀಯ ಅಕ್ಕಿ ಬೆಲೆಗಳು ಏರುಮುಖದ ಪ್ರವೃತ್ತಿ ತೋರಿಸುತ್ತಿವೆ. ಸುಮಾರು 6 ಮಿಲಿಯನ್ ಟನ್ ಭತ್ತದ ಉತ್ಪಾದನೆ ಮತ್ತು ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನಲ್ಲಿ ಶೇಕಡಾ 11 ರಷ್ಟು ಬೆಳವಣಿಗೆಯ ಮುನ್ಸೂಚನೆಯಿಂದಾಗಿ ಏರಿಕೆಯಾಗಬಹುದು ಎನ್ನಲಾಗಿದೆ.
ಚೀನಾದಲ್ಲಿ ಆಹಾರ ಬಿಕ್ಕಟ್ಟು ಸಾಧ್ಯತೆ
ಭಾರತದಿಂದ ರಫ್ತು ನಿಷೇಧ ಚೀನಾದಲ್ಲಿ ಆಹಾರ ಬಿಕ್ಕಟ್ಟಿಗೆ ಕಾರಣವಾಗಬಹುದು. ಸರ್ಕಾರದ ಈ ನಿರ್ಧಾರದಿಂದ ಬೆಲೆ ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ಸರ್ಕಾರ ನೀಡಿರುವ ಮಾಹಿತಿಯಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.
ಅಕ್ಕಿ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ
ಚೀನಾದ ನಂತರ ಭಾರತವು ಅತಿ ಹೆಚ್ಚು ಅಕ್ಕಿಯನ್ನು ಉತ್ಪಾದಿಸುವ ದೇಶವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಅಕ್ಕಿ 40 ಪ್ರತಿಶತವನ್ನು ಹೊಂದಿದೆ. 2021-22ರ ಆರ್ಥಿಕ ವರ್ಷದಲ್ಲಿ ಭಾರತವು 21.2 ಮಿಲಿಯನ್ ಟನ್ ಅಕ್ಕಿಯನ್ನು ರಫ್ತು ಮಾಡಿದೆ. ಅದರಲ್ಲಿ 34.9 ಲಕ್ಷ ಟನ್ ಬಾಸ್ಮತಿ ಅಕ್ಕಿ ಇತ್ತು. ಭಾರತದಲ್ಲಿ ಪ್ರಸ್ತುತ ಖಾರಿಫ್ ಋತುವಿನಲ್ಲಿ, ಭತ್ತದ ಬೆಳೆ ಪ್ರದೇಶವು ಗಣನೀಯವಾಗಿ ಕಡಿಮೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.