ನವದೆಹಲಿ: ಸೀಟ್ ಬೆಲ್ಟ್ ಕುರಿತಾದ ನಿಯಮಗಳನ್ನು ಸರ್ಕಾರ ಕಠಿಣಗೊಳಿಸಲು ಮುಂದಾಗಿದೆ. ಕಾರ್ ಹಿಂದಿನ ಸೀಟುಗಳಲ್ಲಿ ಬೆಲ್ಟ್ ಹಾಕದಿದ್ದರೆ ಅಲರಾಂ ಬರುವಂತಹ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಕರಡು ನಿಯಮ ಬಿಡುಗಡೆ ಮಾಡಲಾಗಿದೆ.
ಟಾಟಾ ಸಂಸ್ಥೆಯ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಕಾರ್ ಅಪಘಾತದಲ್ಲಿ ಮೃತಪಟ್ಟ ನಂತರ ಸೀಟ್ ಬೆಲ್ಟ್ ಕುರಿತ ನಿಯಮಗಳನ್ನು ಕಠಿಣಗೊಳಿಸಲು ಸರ್ಕಾರ ಕ್ರಮಕೈಗೊಂಡಿದೆ. ಹಿಂಬದಿ ಸೀಟಿನಲ್ಲಿರುವವರು ಬೆಲ್ಟ್ ಹಾಕದಿದ್ದರೆ ಅಥವಾ ಮಧ್ಯಂತರದಲ್ಲಿ ಸೀಟ್ ಬೆಲ್ಟ್ ತೆಗೆದರೆ ಅಲರಾಂ ಬರುವಂತಹ ವ್ಯವಸ್ಥೆಯನ್ನು ಎಲ್ಲಾ ಹೊಸ ಕಾರ್ ಗಳಲ್ಲಿ ಕಡ್ಡಾಯ ಮಾಡುವ ವ್ಯವಸ್ಥೆ ಮುಂದಿನ ಆರು ತಿಂಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕರಡು ನಿಯಮದ ಅನ್ವಯ 3 ಹಂತಗಳಲ್ಲಿ ಎಚ್ಚರಿಕೆ ವ್ಯವಸ್ಥೆ ರೂಪಿಸಲಾಗುವುದು. ಕಾರ್ ಇಗ್ನೀಷಿಯನ್ ಗೆ ಕೀ ಹಾಕಿದ ಕೂಡಲೇ ಯಾರಾದರೂ ಸೀಟ್ ಬೆಲ್ಟ್ ಧರಿಸದಿದ್ದರೆ ವಿಶುವಲ್ ಸಮೇತ ಧ್ವನಿ ಎಚ್ಚರಿಕೆ ಮೊಳಗುತ್ತದೆ. ಎರಡನೇ ಹಂತದಲ್ಲಿ ಕಾರ್ ಸ್ಟಾರ್ಟ್ ಆದ ನಂತರ ಸೀಟ್ ಬೆಲ್ಟ್ ಧರಿಸದಿದ್ದರೆ ವಿಡಿಯೋ ಸಮೇತ ಎಚ್ಚರಿಕೆ ನೀಡಲಾಗುವುದು. ಮೂರನೇ ಹಂತದಲ್ಲಿ ಕಾರು ಚಾಲನೆಯಲ್ಲಿದ್ದಾಗ ಯಾರಾದರೂ ಸೀಟ್ ಬೆಲ್ಟ್ ತೆಗೆದಲ್ಲಿ ಅಲರಾಂ ಮೊಳಗಲಿದೆ ಎಂದು ಹೇಳಲಾಗಿದೆ.