ನವದೆಹಲಿ: ದೇಶಾದ್ಯಂತ ಕೊರೋನಾ ಕಾರಣದಿಂದಾಗಿ ದೇಶಿಯ ವಿಮಾನಗಳ ಟಿಕೆಟ್ ದರವನ್ನು ಶೇಕಡ 15 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಮಾನಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಶೇಕಡ 80 ರಿಂದ ಶೇಕಡ 50 ರಷ್ಟು ಇಳಿಕೆ ಮಾಡಲು ತೀರ್ಮಾನಿಸಲಾಗಿದೆ.
ಜೂನ್ 1 ರಿಂದ ಜುಲೈ 31 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ದೇಶಿಯ ವಿಮಾನಗಳ ಕನಿಷ್ಠ ಟಿಕೆಟ್ ದರ 2200 ರೂಪಾಯಿಯಿಂದ 7200 ರೂ. ಹಾಗೂ ಗರಿಷ್ಠ ದರ 7800 ರೂ.ನಿಂದ 24,200 ರೂಪಾಯಿ ಇದೆ.
ಜೂನ್ 1 ರಿಂದ ಜಾರಿಗೆ ಬರುವಂತೆ ಕನಿಷ್ಠ ಪ್ರಯಾಣ ದರ ಕನಿಷ್ಠ 2600 ರೂಪಾಯಿಂದ 7800 ರೂಪಾಯಿಗೆ ಮತ್ತು ಗರಿಷ್ಠ ಪ್ರಯಾಣದರವನ್ನು 8700 ರೂ.ನಿಂದ 24,200 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇದರ ಪರಿಣಾಮವಾಗಿ ದೆಹಲಿ-ಮುಂಬೈ ಏಕಮುಖ ಕನಿಷ್ಠ ಶುಲ್ಕ 4,100 ರೂ.ಗಳಿಂದ 4,700 ರೂ.ಗೆ ಹೆಚ್ಚಾಗುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ತೆರಿಗೆ ಪಾವತಿಸಬೇಕಿದೆ.
ಕಳೆದ ವರ್ಷ ಮಾರ್ಚ್ 25 ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಜೂನ್ 30 ರ ವರೆಗೂ ಅಂತರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ನಿರ್ಬಂಧ ಮುಂದುವರೆಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರಕುಸಾಗಣೆ, ವಿಶೇಷ ಪರವಾನಿಗೆ ಪಡೆದ ವಿಮಾನಗಳು ಮತ್ತು ವಂದೇ ಭಾರತ್ ಮಿಷನ್ ವಿಮಾನಗಳಿಗೆ ಮಾತ್ರ ಅನುಮತಿ ಇರುತ್ತದೆ. ಏರ್ ಬಬಲ್ ಒಪ್ಪಂದ ಮಾಡಿಕೊಂಡ 27 ದೇಶಗಳೊಂದಿಗೆ ನೇರ ವಿಮಾನ ಸಂಚಾರ ಮುಂದುವರೆಯಲಿದೆ.