alex Certify ‘ಬ್ಯಾಂಕಿಂಗ್’ ವಂಚನೆ ತಪ್ಪಿಸಲು ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬ್ಯಾಂಕಿಂಗ್’ ವಂಚನೆ ತಪ್ಪಿಸಲು ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಡಿಜಿಟಲ್ ವಹಿವಾಟು ಹೆಚ್ಚಾದಂತೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸಹ ಏರಿಕೆಯಾಗುತ್ತಿವೆ. ವಂಚಕರು ವಿವಿಧ ರೀತಿಯಲ್ಲಿ ಬ್ಯಾಂಕ್ ಗ್ರಾಹಕರ ಖಾತೆಗಳ ಮಾಹಿತಿ ಪಡೆದು ಹಣ ಎಗರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಮತ್ತು ತಂತ್ರಜ್ಞಾನ ರಕ್ಷಣಾ ವಿಭಾಗದ ಟ್ವಿಟ್ಟರ್ ಖಾತೆ ‘ಸೈಬರ್ ದೋಸ್ತ್’ ಮೂಲಕ ಮಹತ್ವದ ಸೂಚನೆಯನ್ನು ನೀಡಲಾಗಿದೆ.

ಬ್ಯಾಂಕ್ ಗ್ರಾಹಕರು ಎರಡು ಇ ಮೇಲ್ ಖಾತೆಗಳನ್ನು ಹೊಂದುವುದು ಸೂಕ್ತ ಎಂದು ಸೈಬರ್ ದೋಸ್ತ್ ತಿಳಿಸಿದ್ದು, ಒಂದನ್ನು ದೈನಂದಿನ ಕಾರ್ಯಗಳಿಗೆ ಬಳಸಿದರೆ ಮತ್ತೊಂದು ಇ ಮೇಲ್ ಖಾತೆಯನ್ನು ಬ್ಯಾಂಕಿಂಗ್ ವಹಿವಾಟುಗಳಿಗೆ ಮಾತ್ರ ಬಳಸಬೇಕೆಂದು ತಿಳಿಸಲಾಗಿದೆ. ಬ್ಯಾಂಕಿಂಗ್ ವಹಿವಾಟಿಗೆ ಮಾಡಿಕೊಂಡಿರುವ ಇ-ಮೇಲ್, ಅನಿವಾರ್ಯ ಸಂದರ್ಭಗಳಲ್ಲಿ ಬಳಸಬೇಕಾಗಿ ಬಂದರೆ ನಂಬಿಕಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಸಂವಹನ ನಡೆಸಿ ಎಂದು ತಿಳಿಸಲಾಗಿದೆ.

ಅಲ್ಲದೆ, ಬ್ಯಾಂಕಿಂಗ್ ವಹಿವಾಟುಗಳಿಗಾಗಿ ಮಾಡಿಕೊಂಡಿರುವ ಇ ಮೇಲ್ ಖಾತೆ ಮೂಲಕ ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳ ಖಾತೆಯನ್ನು ತೆರೆಯದಂತೆ ತಿಳಿಸಲಾಗಿದ್ದು, ಜೊತೆಗೆ ಆಟೋ ಫಿಲ್ ಫಾರ್ಮ್ ಇರುವ ಬ್ರೌಸರ್ ಗಳಲ್ಲಿ ಡೆಬಿಟ್ / ಕ್ರೆಡಿಟ್ ಕಾರ್ಡ್ ಸಂಖ್ಯೆ, ಸಿವಿವಿ ಸಂಖ್ಯೆ, ಕಾರ್ಡ್ ಎಕ್ಸ್ಪೈರಿ ಡೇಟ್ ಮೊದಲಾದ ಮಾಹಿತಿಗಳನ್ನು ಬಳಸಬೇಡಿ ಎಂದು ಸೂಚಿಸಲಾಗಿದೆ.

ವಂಚಕರು ಬ್ಯಾಂಕಿಂಗ್ ಸಂಸ್ಥೆಗಳ ಇ ಮೇಲ್ ಖಾತೆಯನ್ನೇ ಹೋಲುವಂತೆ ಖಾತೆಗಳನ್ನು ರಚಿಸಿ ಗ್ರಾಹಕರಿಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಕೇಳಿದ ವೇಳೆ ಯಾವುದೇ ಕಾರಣಕ್ಕೂ ಇವುಗಳ ವಿವರವನ್ನು ನೀಡಬೇಡಿ ಎಂದು ಸೈಬರ್ ದೋಸ್ತ್, ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...