ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) 2019 – 20 ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಐಟಿಆರ್ ಸಲ್ಲಿಕೆ ಅವಧಿಯನ್ನು ಡಿಸೆಂಬರ್ 31 ರ ವರೆಗೆ ವಿಸ್ತರಿಸಿದೆ. ನಿಯಮಗಳ ಪ್ರಕಾರ, ಬಾಕಿ ದಿನಾಂಕದ ಒಳಗೆ ಐಟಿಆರ್ ಸಲ್ಲಿಕೆ ಮಾಡದಿದ್ದರೆ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.
ಕಳೆದ ವರ್ಷ 5 ಸಾವಿರ ರೂಪಾಯಿವರೆಗೂ ದಂಡ ವಿಧಿಸಿದ್ದು, ಈ ವರ್ಷ ಗಡುವು ನಂತರವೂ ಐಟಿಆರ್ ಸಲ್ಲಿಕೆ ಮಾಡದಿದ್ದರೆ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು. ನಿಯಮಗಳ ಪ್ರಕಾರ ವಾರ್ಷಿಕವಾಗಿ 2.5 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಐಟಿಆರ್ ಸಲ್ಲಿಸಬೇಕಿದೆ.
ಹಿರಿಯ ನಾಗರಿಕರಿಗೆ 60 ವರ್ಷ ಮತ್ತು 80 ವರ್ಷದೊಳಗಿನವರಿಗೆ 5 ಲಕ್ಷ ರೂಪಾಯಿವರೆಗೂ ಅವಕಾಶ ನೀಡಲಾಗಿದೆ. ವಿಳಂಬ ಸಲ್ಲಿಕೆಗೆ ಕಳೆದ ವರ್ಷ 5000 ರೂ. ದಂಡ ವಿಧಿಸಲಾಗಿತ್ತು. ಈ ವರ್ಷ 10 ಸಾವಿರ ರೂಪಾಯಿವರೆಗೆ ವಿಸ್ತರಿಸಲಾಗಿದೆ.
ಆದಾಯ ತೆರಿಗೆ ಕಾಯ್ದೆ 1961 ರ ಅನ್ವಯ ಈ ಕೆಳಗಿನ ವರ್ಗದವರಿಗೆ ದಂಡದಿಂದ ವಿನಾಯಿತಿ ನೀಡಲಾಗುವುದಿಲ್ಲ:
ಒಂದು ಅಥವಾ ಹೆಚ್ಚಿನ ಬ್ಯಾಂಕ್ ಖಾತೆಗಳಲ್ಲಿ ಒಂದು ಕೋಟಿ ರೂಪಾಯಿ ಮೀರಿದ ಮೊತ್ತ ಹೊಂದಿದವರು ಅಥವಾ ಮೊತ್ತವನ್ನು ಜಮಾ ಮಾಡಿದ ವ್ಯಕ್ತಿಗಳು
ವಿದೇಶಿ ಪ್ರಯಾಣದಿಂದಾಗಿ ಎರಡು ಲಕ್ಷ ರೂಪಾಯಿಗಿಂತ ಹೆಚ್ಚು ಖರ್ಚು ಮಾಡಿದ ವ್ಯಕ್ತಿಗಳು
ವಿದ್ಯುತ್ ಬಳಕೆಯಿಂದಾಗಿ 1 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಖರ್ಚು ಅಥವಾ ಒಟ್ಟು ಖರ್ಚು ಮಾಡುವವರು
ಐಟಿಆರ್ ಬಾಕಿಯನ್ನು ಸಲ್ಲಿಸುವುದರಿಂದ ತೆರಿಗೆ ಮರುಪಾವತಿಗೆ ಪಾವತಿಸಬೇಕಾದ ಬಡ್ಡಿಯನ್ನು ಸಂಬಂಧಿತ ಮೌಲ್ಯಮಾಪನ ವರ್ಷದ ಏಪ್ರಿಲ್ 1 ರಿಂದ ಲೆಕ್ಕ ಹಾಕಲಾಗುವುದು. ವಿಳಂಬದ ಫೈಲಿಂಗ್ ಸಂದರ್ಭದಲ್ಲಿ ವ್ಯಕ್ತಿಯು ದಂಡ ಪಾವತಿಸಬೇಕಾಗುತ್ತದೆ.
ತೆರಿಗೆದಾರರ ನಿವ್ವಳ ಒಟ್ಟು ಆದಾಯ ತೆರಿಗೆ ವಿನಾಯಿತಿ ಪಡೆದ ನಂತರ ಹಣಕಾಸು ವರ್ಷದಲ್ಲಿ 5 ಲಕ್ಷ ರೂ. ಮೀರಿದರೆ ಮಾತ್ರ ಭಾರಿ ತಡವಾಗಿ ಸಲ್ಲಿಸುವ ಶುಲ್ಕ ಅನ್ವಯವಾಗುತ್ತದೆ.
5 ಲಕ್ಷ ರೂಪಾಯಿವರೆಗೆ ತೆರಿಗೆ ವಿಧಿಸಬಹುದಾದ ವ್ಯಕ್ತಿಗಳು ಡಿಸೆಂಬರ್ 31 ರ ನಂತರ ತಮ್ಮ ಐಟಿಆರ್ ಸಲ್ಲಿಸಿದರೆ 1000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. 5 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯವಿದ್ದರೆ ದಂಡದ ಮೊತ್ತ 10 ಸಾವಿರ ರೂಪಾಯಿವರೆಗೂ ಪಾವತಿಸಬೇಕಾಗಬಹುದು ಎನ್ನಲಾಗಿದೆ.