ನವದೆಹಲಿ: 2021ರ ಏಪ್ರಿಲ್ ನಿಂದ 2022 ರ ಜುಲೈ ನಡುವೆ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 2,500 ಕ್ಕೂ ಹೆಚ್ಚು ಸಾಲದ ವಂಚನೆಯ ಅಪ್ಲಿಕೇಶನ್‌ಗಳನ್ನು ಅಮಾನತುಗೊಳಿಸಿದೆ ಅಥವಾ ತೆಗೆದುಹಾಕಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ವಂಚನೆಯ ಸಾಲದ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಲು ಸಂಬಂಧಿಸಿದ ಇತರ ನಿಯಂತ್ರಕರು ಮತ್ತು ಮಧ್ಯಸ್ಥಗಾರರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ಸರ್ಕಾರ ನಿರಂತರವಾಗಿ ತೊಡಗಿಸಿಕೊಂಡಿದೆ. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಸಭೆಗಳಲ್ಲಿ ಈ ವಿಷಯವನ್ನು ನಿಯಮಿತವಾಗಿ ಚರ್ಚಿಸಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ವಂಚನೆಯ ಸಾಲದ ಆ್ಯಪ್‌ಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಕುರಿತು, ಆರ್‌ಬಿಐ ಕಾನೂನು ಅಪ್ಲಿಕೇಶನ್‌ಗಳ ‘ವೈಟ್‌ಲಿಸ್ಟ್’ ಅನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿದೆ ಎಂದು ಹೇಳಿದ್ದಾರೆ.
ಪ್ಲೇ ಸ್ಟೋರ್‌ನಲ್ಲಿ ಸಾಲ ನೀಡುವ ಅಪ್ಲಿಕೇಶನ್‌ಗಳ ಜಾರಿ ಕುರಿತು ಗೂಗಲ್ ತನ್ನ ನೀತಿಯನ್ನು ನವೀಕರಿಸಿದೆ. ಭಾರತದಲ್ಲಿ ಸಾಲ ನೀಡುವ ಅಪ್ಲಿಕೇಶನ್‌ಗಳಿಗೆ ಕಟ್ಟುನಿಟ್ಟಾದ ಜಾರಿ ಕ್ರಮಗಳೊಂದಿಗೆ ಹೆಚ್ಚುವರಿ ನೀತಿ ಅನ್ವಯಸಿದೆ ಎಂದು ಅವರು ಹೇಳಿದ್ದಾರೆ.