ತಾಂತ್ರಿಕ ಲೋಕದ ಅತಿ ದೊಡ್ಡ ಹೆಸರುಗಳಲ್ಲಿ ಒಂದಾದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಶಿಕ್ಷಣ ಸಂಸ್ಥೆಯೊಂದರ ಪದವಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದು, ತಾವು ಬೆಳೆದು ಬಂದ ಕಷ್ಟದ ದಿನಗಳನ್ನು ಸ್ಮರಿಸಿದ್ದಾರೆ.
ದೊಡ್ಡ ದೊಡ್ಡ ಸಾಧಕರ ಸ್ಪೂರ್ತಿಯುತ ಮಾತುಗಳನ್ನು “Dear Class of 2020” ಹೆಸರಿನ ಬ್ರಾಡ್‌ಕಾಸ್ಟ್‌ನಲ್ಲಿ ಪ್ರಸಾರ ಮಾಡುವ ಯೂಟ್ಯೂಬ್‌ನಲ್ಲಿ ಪಿಚ್ಚೈ ಮಾತುಗಳು ಬಿತ್ತರಗೊಂಡಿವೆ.
“ತಾಂತ್ರಿಕ ಲೋಕದಲ್ಲಿ ಘಟಿಸುವ ಕೆಲವೊಂದು ವಿದ್ಯಮಾನಗಳು ನಿಮ್ಮನ್ನು ಹತಾಶೆಗೊಳಿಸಬಹುದು, ನಿಮ್ಮ ತಾಳ್ಮೆ ಪರೀಕ್ಷೆ ಮಾಡಬಹುದು. ಸಹನೆಯನ್ನು ನೀವು ಕಳೆದುಕೊಳ್ಳಬೇಡಿ. ಅದರಿಂದ ನಮ್ಮ ತಲೆಮಾರು ಊಹಿಸಲೂ ಸಾಧ್ಯವಿಲ್ಲದ ಆವಿಷ್ಕಾರವೊಂದನ್ನು ಮಾಡಲು ನಿಮ್ಮಿಂದ ಸಾಧ್ಯವಾಗಬಹುದು,” ಎಂದಿದ್ದಾರೆ ಪಿಚ್ಚೈ.
ತಮ್ಮ ಹಳೆಯ ದಿನಗಳನ್ನು ನೆನೆದ ಪಿಚ್ಚೈ, “ನಾನು ಸ್ಟಾನ್‌ಫೋರ್ಡ್ ವಿವಿಯಲ್ಲಿ ಸೇರಿಕೊಳ್ಳಲೆಂದು ಅಮೆರಿಕಕ್ಕೆ ನನ್ನನ್ನು ಕಳುಹಿಸಲು ನನ್ನ ತಂದೆ ತಮ್ಮ ಒಂದು ವರ್ಷದ ಸಂಬಳವನ್ನು ವ್ಯಯಿಸಿದ್ದಾರೆ. ನಾನು ಅದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದು. ಅಮೆರಿಕ ಬಲು ದುಬಾರಿಯಾಗಿತ್ತು. ಮನೆಗೆ ಒಂದು ಕರೆ ಮಾಡಲು ಪ್ರತಿ ನಿಮಿಷಕ್ಕೆ $2 ತಗುಲುತ್ತಿತ್ತು. ನನ್ನ ಬ್ಯಾಕ್‌ಪ್ಯಾಕ್ ಒಂದಕ್ಕೆ ನನ್ನ ತಂದೆಯ ಒಂದು ತಿಂಗಳ ಸಂಬಳದಷ್ಟು ಖರ್ಚಾಗುತ್ತಿತ್ತು” ಎಂದಿದ್ದು ತಾವೆಷ್ಟು ಕಷ್ಟದ ದಿನಗಳನ್ನು ದೃಢ ಸಂಕಲ್ಪದಿಂದ ಎದುರಿಸಿ ಮೇಲೆ ಬಂದಿದ್ದೇನೆ ಎಂಬುದನ್ನು ತಿಳಿಸಿದ್ದಾರೆ.
“ನನ್ನನ್ನು ಆ ಮಟ್ಟದಿಂದ ಇಲ್ಲಿಯವರೆಗೂ ಬರುವಂತೆ ಮಾಡಲು ಅದೃಷ್ಟದೊಂದಿಗೆ ತಂತ್ರಜ್ಞಾನ ಕ್ಷೇತ್ರದ ಕುರಿತು ಆಳವಾದ ಆಸಕ್ತಿ ಹಾಗೂ ಮುಕ್ತವಾದ ಮನಸ್ಥಿತಿ ಕಾರಣ” ಎಂದು 48 ವರ್ಷದ ಟಾಪ್ ಸಿಇಒ ತಿಳಿಸಿದ್ದಾರೆ.
ಚೆನ್ನೈನಲ್ಲಿ ಹುಟ್ಟಿ ಬೆಳೆದ ಪಿಚ್ಚೈ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು, ಸ್ಟಾನ್‌ಫೋರ್ಡ್ ವಿವಿಯಲ್ಲಿ ಮಾಸ್ಟರ್ಸ್ ಹಾಗೂ ವ್ಹಾರ್ಟನ್ ಸ್ಕೂಲ್‌ನಲ್ಲಿ MBA ಪದವಿಯನ್ನೂ ಪಡೆದಿದ್ದಾರೆ.
2004ರಲ್ಲಿ ಗೂಗಲ್ ಸೇರಿಕೊಂಡ ಪಿಚ್ಚೈ, ಗೂಗಲ್ ಟೂಲ್ ಬಾರ್ ಹಾಗೂ ಗೂಗಲ್ ಕ್ರೋಮ್‌ಗಳಂಥ ಅಂತರ್ಜಾಲದ ಪವರ್‌ಫುಲ್ ಟೂಲ್‌ಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.