ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಳಿಕ 14 ದಿನಗಳ ಕಾಲ ಲಾಕ್ ಡೌನ್ ಮಾದರಿ ಕಠಿಣ ನಿಯಮ ಜಾರಿಗೆ ತರಲಾಗುತ್ತಿದೆ. ಇದೇ ಹೊತ್ತಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಅಗತ್ಯ ವಸ್ತುಗಳ ಖರೀದಿಗೆ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಸರ್ಕಾರ ಅವಕಾಶ ನೀಡಿದೆ. ಆದರೆ, ಪೂರೈಕೆ ಕೊರತೆ, ಬೆಲೆ ಏರಿಕೆ ಆತಂಕದಲ್ಲಿ ಜನಸಾಮಾನ್ಯರು ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದಾರೆ. ಎಣ್ಣೆ, ಅಕ್ಕಿ, ರಾಗಿ, ಜೋಳ, ಬೇಳೆಕಾಳು, ಸೋಪು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಮಾರುಕಟ್ಟೆಗಳ ಬಳಿ ಜನಸಂದಣಿಯೇ ಕಂಡುಬಂದಿದೆ. ದಿನಸಿ ಅಂಗಡಿಗಳಲ್ಲಿ ಜನ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ.
ಮೊದಲೇ ಕೊರೊನಾದಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಜನ ಚೇತರಿಸಿಕೊಳ್ಳುವ ಹೊತ್ತಲ್ಲೇ ಮತ್ತೊಂದು ಬರಸಿಡಿಲು ಬಂದೆರಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಜನತಾ ಕರ್ಫ್ಯೂ ಜಾರಿಯಾಗುತ್ತಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ.
ಅನೇಕರು ಮಾಮೂಲಿಯಾಗಿ ಖರೀದಿಸುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿದ್ದಾರೆ. ಆದರೆ, ಬಡವರು, ಜನಸಾಮಾನ್ಯರಿಗೆ ಬೆಲೆ ಏರಿಕೆಯಿಂದ ಸಮಸ್ಯೆಯಾಗಿದ್ದು ಅಲ್ಪಪ್ರಮಾಣದಲ್ಲಿ ಅಗತ್ಯ ವಸ್ತು ಖರೀದಿಸಿದ್ದಾರೆ. ಪ್ರತಿದಿನ ಬೆಳಗ್ಗೆ 4 ಗಂಟೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ ಎಂದು ಹೇಳಲಾಗಿದ್ದರೂ ಕೆಲಸವಿಲ್ಲದ ಕಾರಣ ದುಡಿಮೆ ಇಲ್ಲದಂತಾಗುತ್ತದೆ. ದೈನಂದಿನ ದುಡಿಮೆ ನಂಬಿ ಬದುಕುತ್ತಿದ್ದವರಿಗೆ ಟಫ್ ರೂಲ್ಸ್ ಮತ್ತೆ ಸಂಕಷ್ಟಕ್ಕೆ ದೂಡಿದೆ ಎನ್ನಲಾಗಿದೆ.