
ನವದೆಹಲಿ: 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಹೊಸ ವಾಹನದ ಮೌಲ್ಯದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಗುಜರಿ ನೀತಿ ಅನ್ವಯ 15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವಾಗ ವಾಹನ ಖರೀದಿಸುವವರಿಗೆ ಕಂಪನಿಯಿಂದಲೇ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗುಜರಿಗೆ ಹಾಕುವ ಹಳೆಯ ವಾಹನದ ಗುಣಮಟ್ಟಕ್ಕೆ ಅನುಸಾರ ಹಸಿರು ತೆರಿಗೆ ಮತ್ತು ಲೆವಿಗಳಲ್ಲಿ ವಿನಾಯಿತಿ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ ನಿಗದಿಪಡಿಸಿದ ಫಿಟ್ನೆಸ್ ಪರೀಕ್ಷೆಗಳಲ್ಲಿ ಹಳೆಯ ವಾಹನಗಳು ಪಾಸಾಗಬೇಕು. 20 ವರ್ಷ ಮೇಲ್ಪಟ್ಟ ಪ್ಯಾಸೆಂಜರ್ ವಾಹನಗಳು, 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಕಳುಹಿಸಬೇಕು ಈ ವಾಹನಗಳು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಆರಂಭಿಸುವ ಪರೀಕ್ಷಾ ಕೇಂದ್ರಗಳಲ್ಲಿ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗದ ವಾಹನಗಳ ಮೇಲೆ ಭಾರಿ ಪ್ರಮಾಣದ ದಂಡ ಹಾಕಲಾಗುವುದು.