ನವದೆಹಲಿ: ಹೊಸ ವರ್ಷದಲ್ಲಿ ನೇಮಕಾತಿ ಹೆಚ್ಚಳ ಆಗಲಿದೆ. ಜನವರಿಯಿಂದ ಮಾರ್ಚ್ ವರೆಗಿನ 2024ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಶೇಕಡ 49ರಷ್ಟು ಕಂಪನಿಗಳು ಹೆಚ್ಚಿನ ನೇಮಕಾತಿ ಮಾಡಿಕೊಳ್ಳಲು ಸಮೀಕ್ಷೆಯೊಂದರಲ್ಲಿ ಹೇಳಿದ್ದು, ಶುಭ ಸೂಚಕವಾಗಿದೆ.
ಮ್ಯಾನ್ ಪವರ್ ಗ್ರೂಪ್ ಎಂಪ್ಲಾಯ್ ಮೆಂಟ್ ಔಟ್ ಲುಕ್ ಜಾಗತಿಕ ಸಮೀಕ್ಷೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತವಾಗಿದ್ದು, 41 ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನೇಮಕಾತಿಯ ಅವಕಾಶ ಹೆಚ್ಚಾಗಿವೆ ಎಂದು ತಿಳಿಸಿದೆ.
ಶೇ. 12 ರಷ್ಟು ಕಂಪನಿಗಳು ತಮ್ಮ ನೇಮಕಾತಿ ಯೋಜನೆಗಳಲ್ಲಿ ಇಳಿಕೆ ಬಗ್ಗೆ ಮಾಹಿತಿ ನೀಡಿವೆ. ಶೇಕಡ 30ರಷ್ಟು ಕಂಪೆನಿಗಳು ಪ್ರಸ್ತುತ ಉದ್ಯೋಗಿಗಳ ಮಟ್ಟ ಕಾಯ್ದುಕೊಳ್ಳಲು ಯೋಜಿಸಿವೆ. ಶೇ. 3 ರಷ್ಟು ಕಂಪನಿಗಳು ಅನಿಶ್ಚಿತತೆಯಿಂದ ಇವೆ. ಕಳೆದ ವರ್ಷದ ಇದೆ ಅವಧಿಗೆ ಹೋಲಿಕೆ ಮಾಡಿದಲ್ಲಿ ನೇಮಕಾತಿ ಮುನ್ನೋಟ ಶೇಕಡ 5ರಷ್ಟು ಹೆಚ್ಚಾಗಿದೆ.
ಭಾರತದಲ್ಲಿ ನೇಮಕಾತಿ ಹೆಚ್ಚಲು ಅನೇಕ ಕಾರಣಗಳಿವೆ. ದೇಶಿಯ ಮಟ್ಟದ ಬೇಡಿಕೆ, ನಿರಂತರ ಖಾಸಗಿ ಹೂಡಿಕೆಗಳಿಂದ ಭಾರತದಲ್ಲಿ ನೇಮಕಾತಿ ಹೆಚ್ಚಾಗಬಹುದು. ಭಾರತವು ಆಕರ್ಷಕ ಆರ್ಥಿಕತೆಯಾಗಿದ್ದು, ಹೊಸ ಭರವಸೆ ಸೃಷ್ಟಿಯಾಗಿದೆ ಎಂದು ಮ್ಯಾಮ್ ಪವರ್ ಗ್ರೂಪ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಗುಲಾಟಿ ಅಭಿಪ್ರಾಯಪಟ್ಟಿದ್ದಾರೆ.