ಬೆಂಗಳೂರು : ರಾಜ್ಯದ ಮುಜರಾಯಿ ಇಲಾಖೆಯ ವಯೋವೃದ್ದ ಅರ್ಚಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, 2 ಲಕ್ಷ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ.
ಹೌದು. ಈ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದು, ರಾಜ್ಯದ ಮುಜರಾಯಿ ಇಲಾಖೆ ಅಧೀನದ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ 65 ವರ್ಷಕ್ಕೆ ನಿವೃತ್ತರಾಗುವ ಅರ್ಚಕರಿಗೆ ಸರ್ಕಾರ 2 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ. ರಾಜ್ಯದಲ್ಲಿ ವರ್ಷದಲ್ಲಿ ಸುಮಾರು 150 ರಿಂದ 160 ಮಂದಿ ಅರ್ಚಕರು ನಿವೃತ್ತರಾಗುತ್ತಿದ್ದು, ಅವರ ಜೀವನ ಸುಧಾರಣೆಗೆ ಸರ್ಕಾರ 2 ಲಕ್ಷ ರೂ ನೆರವು ನೀಡಲಿದೆ ಎಂದು ಮಾಹಿತಿ ನೀಡಿದರು.
ಮುಜರಾಯಿ ಇಲಾಖೆಯು ತನ್ನ ದೇವಾಲಯಗಳಲ್ಲಿ ವಾರ್ಷಿಕ ಆದಾಯದ ಆಧಾರದ ಮೇಲೆ ಎ, ಬಿ ಮತ್ತು ಸಿ ಎಂದು ವಿಭಾಗ ಮಾಡಿ. ‘ಸಿ’ ವರ್ಗದ ದೇವಾಲಯಗಳ ಅರ್ಚಕರು ಮತ್ತು ಕುಟುಂಬದವರು ‘ಎ’ ವರ್ಗದ ದೇವಾಲಯಗಳಲ್ಲಿ ವಿಶೇಷ ದರ್ಶನ, ವಸತಿ ವ್ಯವಸ್ಥೆ ಪಡೆಯಲು ಸುತ್ತೋಲೆ ಪ್ರಕಟಿಸಿತ್ತು.ಅಲ್ಲದೇ ದೇವಾಲಯಗಳಲ್ಲಿ ಮೊಬೈಲ್ ಬಳಕೆ ಕೂಡ ನಿಷೇಧಿಸಿತ್ತು, ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ದೇವಾಲಯಗಳಿವೆ.