
ನವದೆಹಲಿ: ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕಾಯ್ದಿರಿಸಿದ ಟಿಕೆಟ್ ರದ್ದತಿ ಸಮಯ ವಿಸ್ತರಣೆ ಮಾಡಲಾಗಿದೆ.
ಹೌದು, ರೈಲು ಪ್ರಯಾಣಿಕರ ಮುಖದಲ್ಲಿ ಮಂದಹಾಸ ಮೂಡಿಸುವ ನಿರ್ಧಾರವೊಂದನ್ನು ಭಾರತೀಯ ರೈಲ್ವೆ ಕೈಗೊಂಡಿದೆ. ಟಿಕೆಟ್ ಕಾಯ್ದಿರಿಸುವಿಕೆ ಕೌಂಟರ್ ನಿಂದ ಕಳೆದ ವರ್ಷ ಮಾರ್ಚ್ 21 ರಿಂದ ಜುಲೈ 31 ರವರೆಗೆ ಕಾಯ್ದಿರಿಸಿದ ರೈಲು ಟಿಕೆಟ್ ಗಳನ್ನು ರದ್ದುಗೊಳಿಸುವ ಸಮಯವನ್ನು ಆರು ತಿಂಗಳಿನಿಂದ ಒಂಬತ್ತು ತಿಂಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಟಿಕೆಟ್ ರದ್ದತಿ ಶುಲ್ಕವನ್ನು ಮರುಪಾವತಿಸಲು ಪ್ರಯಾಣದ ದಿನದಿಂದ 6 ತಿಂಗಳಿಂದ 9 ತಿಂಗಳವರೆಗೆ ಸಮಯದ ಮಿತಿಯನ್ನು ವಿಸ್ತರಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.
ಮಾರ್ಚ್ 21, 2020 ರಿಂದ ಜುಲೈ 31, 2020 ರ ವರೆಗೆ ರೈಲ್ವೆ ಇಲಾಖೆ ರದ್ದುಪಡಿಸಿದ ಸಾಮಾನ್ಯ ವೇಳಾಪಟ್ಟಿ ರೈಲುಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಪ್ರಯಾಣದ ದಿನಾಂಕದಿಂದ 9 ತಿಂಗಳವರೆಗೆ ಇದು ಅನ್ವಯವಾಗಲಿದೆ.
ಕೊರೋನಾ ಕಾರಣದಿಂದ ಟಿಕೆಟ್ ರದ್ದತಿ ಮತ್ತು ಶುಲ್ಕವನ್ನು ಮರುಪಾವತಿಸಲು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ರದ್ದುಪಡಿಸಿದ ರೈಲುಗಳಿಗೆ ಟಿಕೆಟ್ ಗಳನ್ನು 139 ಮೂಲಕ ಅಥವಾ ಐಆರ್ಸಿಟಿಸಿ ವೆಬ್ಸೈಟ್ ಮೂಲಕ ರದ್ದುಗೊಳಿಸಿದ ಸಮಯ ವಿಸ್ತರಣೆಯಾಗಿದೆ ಎಂದು ಹೇಳಲಾಗಿದೆ.