ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ, ಬಾಡಿಗೆದಾರರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಉತ್ತರ ಪ್ರದೇಶ ಸರ್ಕಾರ ಹೊಸ ಬಾಡಿಗೆದಾರರ ಕಾನೂನಿಗೆ ಅನುಮೋದನೆ ನೀಡಿದೆ.
ಹೊಸ ಕಾನೂನಿನ ಪ್ರಕಾರ ಮನೆ ಮಾಲೀಕರು ಮನಸ್ಸಿಗೆ ಬಂದಷ್ಟು ಬಾಡಿಗೆಯನ್ನು ವಿಧಿಸುವಂತಿಲ್ಲ. ಇದ್ರಿಂದ ಬಾಡಿಗೆದಾರರು ಹಾಗೂ ಮಾಲೀಕರ ಮಧ್ಯೆಯ ಗಲಾಟೆ ಕಡಿಮೆಯಾಗಲಿದೆ.
ಮನೆ ಮಾಲೀಕರು, ಬಾಡಿಗೆ ಒಪ್ಪಂದವಿಲ್ಲದೆ ಮನೆಯನ್ನು ಬಾಡಿಗೆಗೆ ನೀಡಲು ಸಾಧ್ಯವಿಲ್ಲ. ಮನೆ ಮಾಲೀಕ ಹಾಗೂ ಬಾಡಿಗೆದಾರರ ಗಲಾಟೆಯನ್ನು ಬಗೆಹರಿಸಲು ಬಾಡಿಗೆ ಪ್ರಾಧಿಕಾರ ಮತ್ತು ಬಾಡಿಗೆ ನ್ಯಾಯಮಂಡಳಿ ರಚಿಸಲಾಗಿದೆ. ಬಾಡಿಗೆ ಪ್ರಾಧಿಕಾರ ಮತ್ತು ಬಾಡಿಗೆ ನ್ಯಾಯಮಂಡಳಿ 60 ದಿನಗಳೊಳಗೆ ವಿವಾದವನ್ನು ಬಗೆಹರಿಸಬೇಕಾಗುತ್ತದೆ.
ಹೊಸ ಕಾನೂನಿನ ಪ್ರಕಾರ, ಯಾವುದೇ ಭೂಮಾಲೀಕರು ಅನಿಯಂತ್ರಿತವಾಗಿ ಬಾಡಿಗೆಯನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಅವರು ವಸತಿ ಮನೆಗಳಿಗೆ ಕೇವಲ ಶೇಕಡಾ 5 ರಷ್ಟು ಮತ್ತು ವಸತಿ ರಹಿತ ಆಸ್ತಿಗೆ ಕೇವಲ ಶೇಕಡಾ 7 ರಷ್ಟು ಬಾಡಿಗೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಬಾಡಿಗೆ ಒಪ್ಪಂದ ಪೂರ್ಣಗೊಂಡ ನಂತರ ಅದರ ನವೀಕರಣ ಕಡ್ಡಾಯವಾಗಲಿದೆ. ಎರಡು ತಿಂಗಳ ಕಾಲ ಮನೆ ಬಾಡಿಗೆ ಪಾವತಿಸದೆ ಹೋದಲ್ಲಿ ಬಾಡಿಗೆದಾರರನ್ನು ಮನೆಯಿಂದ ಹೊರಹಾಕಬಹುದು. ಮಾಲೀಕ ಬಾಡಿಗೆ ರಶೀದಿಯನ್ನು ಬಾಡಿಗೆದಾರನಿಗೆ ನೀಡಬೇಕಾಗುತ್ತದೆ.