ಪೆಟ್ರೋಲ್-ಡೀಸೆಲ್, ಆಹಾರಗಳ ಬೆಲೆ ಏರಿಕೆ ಮಧ್ಯೆಯೇ ಮದುವೆ ಮಾಡಲು ಸಿದ್ಧರಾಗಿರುವ ಜನರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಮದುವೆ ಋತುವಿನಲ್ಲಿ ಬಂಗಾರದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಶುಕ್ರವಾರ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆ 44,400 ರೂಪಾಯಿಯಾಗಿದೆ.
ಶುಕ್ರವಾರ ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.3ರಷ್ಟು ಕುಸಿದಿದೆ. ಬೆಳ್ಳಿ ಬೆಲೆ ಶೇಕಡಾ 0.6ರಷ್ಟು ಇಳಿಕೆ ಕಂಡಿದ್ದು, ಕೆ.ಜಿಗೆ 65,523 ರೂಪಾಯಿಯಾಗಿದೆ. ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆಗಳು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಗುರುವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 44,589 ರೂಪಾಯಿಗೆ ಬಂದ್ ಆಗಿತ್ತು.
ಕಳೆದ 10 ತಿಂಗಳಲ್ಲಿ ಚಿನ್ನದ ಬೆಲೆ 12000 ರೂಪಾಯಿಗಳಷ್ಟು ಕಡಿಮೆಯಾಗಿದೆ. ಆಗಸ್ಟ್ 2020 ರಲ್ಲಿ ಚಿನ್ನ ದಾಖಲೆ ಮಟ್ಟ ತಲುಪಿತ್ತು. ಚಿನ್ನದ ಬೆಲೆ 56,200 ರೂಪಾಯಿಯಾಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡಾ 0.2ರಷ್ಟು ಇಳಿಕೆ ಕಂಡು 1,693.79 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ ಕೂಡ ಶೇಕಡಾ 0.2ರಷ್ಟು ಏರಿಕೆ ಕಂಡು 25.35 ಡಾಲರ್ ಪ್ರತಿ ಔನ್ಸ್ ಆಗಿದೆ.