ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಯ ನಂತರ ಮಾರುಕಟ್ಟೆಯಲ್ಲಿ ಅನೇಕ ಪರಿಣಾಮ ಉಂಟಾಗಿದ್ದು, ಬಂಗಾರದ ಬೆಲೆ 50 ಸಾವಿರ ರೂಪಾಯಿಯತ್ತ ದಾಪುಗಾಲಿಟ್ಟಿದೆ.
ಜನವರಿ 6 ರಂದು 51,875 ರೂಪಾಯಿ ಇದ್ದ 10 ಗ್ರಾಂ ಚಿನ್ನದ ದರ ಕುಸಿತ ಕಂಡು ಮಾರ್ಚ್ 29 ಕ್ಕೆ 43,320 ರೂಗೆ ಇಳಿಕೆಯಾಗಿತ್ತು. ಈಗ 47,000 ರೂಪಾಯಿ ಗಡಿದಾಟಿ ಮುನ್ನುಗ್ಗುತ್ತಿರುವ ಚಿನ್ನದ ದರ ಮುಂದಿನ ತಿಂಗಳಲ್ಲಿ 50,000 ರೂ. ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯತ್ತ ಸಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪರಿಣಾಮ ಮತ್ತು ಬೆಳವಣಿಗೆ ಆಧರಿಸಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಹೆಚ್ಚಳವಾಗಿದೆ. ಕೊರೋನಾ ಹೊಡೆತದಿಂದ ಷೇರು ಮಾರುಕಟ್ಟೆ ಕುಸಿತವಾಗಿದ್ದು, ಚಿನ್ನಕ್ಕೆ ಬೇಡಿಕೆ ಬಂದಿದೆ. ಮದುವೆ ಸೀಸನ್ ಕೂಡ ಆಗಿರುವುದರಿಂದ ಚಿನ್ನಾಭರಣ ಖರೀದಿ ಹೆಚ್ಚಾಗಿದೆ. ಹೀಗಾಗಿ ಚಿನ್ನದ ದರ ಏರುಗತಿಯಲ್ಲಿ ಸಾಗಿದೆ ಎಂದು ಹೇಳಲಾಗಿದೆ.