ನವದೆಹಲಿ: ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಚಿನ್ನದ ಬೆಲೆ ಈಗ 59,000 ರೂ. ಸಮೀಪಕ್ಕೆ ತಲುಪಿದೆ, ಬೆಳ್ಳಿ ಕೂಡ 1500 ರೂ. ಹೆಚ್ಚಳವಾಗಿದೆ.
ಬಜೆಟ್ ನಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇಂದು MCX ನಲ್ಲಿ ಚಿನ್ನದ ಬೆಲೆ ತನ್ನ ಹೊಸ ದಾಖಲೆಯ ಮಟ್ಟವನ್ನು ತಲುಪಿದೆ. ಜಾಗತಿಕ ಮಾರುಕಟ್ಟೆಯ ಅಬ್ಬರದ ನಡುವೆಯೇ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು 58,600 ರೂ. ಇದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ.
ಗುರುವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 770 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 58,680 ರೂಪಾಯಿಗಳಿಗೆ ತಲುಪಿದೆ. ಅದೇ ಸಮಯದಲ್ಲಿ, ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 57,910 ರೂ. ಇತ್ತು. ಇದಲ್ಲದೇ ಬೆಳ್ಳಿಯ ಬೆಲೆಯೂ 1,491 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 71,666 ರೂಪಾಯಿಗಳಿಗೆ ತಲುಪಿದೆ.