ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿದ ಗೌತಮ್ ಅದಾನಿ ಈಗ ವಿಶ್ವದ 4 ನೇ ಶ್ರೀಮಂತರಾಗಿದ್ದಾರೆ ಎಂದು ಫೋರ್ಬ್ಸ್ ಬಿಲಿಯನೇರ್ ಗಳ ಪಟ್ಟಿ ತಿಳಿಸಿದೆ.
ಫೋರ್ಬ್ಸ್ ನ ರಿಯಲ್-ಟೈಮ್ ಬಿಲಿಯನೇರ್ ಗಳ ಪಟ್ಟಿಯ ಪ್ರಕಾರ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ 115.5 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 4 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ, ಗೂಗಲ್ ಕೋಫೌಂಡರ್ ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿದ್ದಾರೆ.
ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ, ಅದಾನಿ ಗ್ರೂಪ್ ಷೇರುಗಳ ಮೌಲ್ಯ ಏರಿಕೆಯಾಗಿ ಅದಾನಿ ಅವರ ಸಂಪತ್ತು 2.9 ಶತಕೋಟಿ ಡಾಲರ್ ಗಳಷ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಪೇಜ್ ಅವರ ನಿವ್ವಳ ಮೌಲ್ಯವು 2.2 ಶತಕೋಟಿ ಡಾಲರ್ ಗಳಷ್ಟು ಕುಸಿಯಿತು. ಫೋರ್ಬ್ಸ್ ಬಿಲಿಯನೇರ್ ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಅದಾನಿ ಸಮೂಹದ ಅಧ್ಯಕ್ಷರಿಗೆ ಬಿಟ್ಟುಕೊಟ್ಟಿದೆ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ವಾರ ತಮ್ಮ ಲಾಭೋದ್ದೇಶವಿಲ್ಲದ ಸಂಸ್ಥೆ – ಬಿಲ್ & ಮೆಲಿಂಡಾ ಗೇಟ್ಸ್ ಗೆ ತಮ್ಮ ಸಂಪತ್ತಿನ 20 ಶತಕೋಟಿ ಡಾಲರ್ ದೇಣಿಗೆಯನ್ನು ಘೋಷಿಸಿದ ನಂತರ ಬಿಲಿಯನೇರ್ ಗಳ ಶ್ರೇಯಾಂಕಗಳು ಬದಲಾಗಿವೆ.
ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಖೇಶ್ ಅಂಬಾನಿ, 87.7 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದು, ಫೋರ್ಬ್ಸ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ.
ಆದಾಗ್ಯೂ, ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ಅದಾನಿ 5 ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್ ಬರ್ಗ್ ನೈಜ-ಸಮಯದ ಮಾಹಿತಿಯ ಪ್ರಕಾರ ಅವರ ಸಂಪತ್ತು 110 ಶತಕೋಟಿ ಡಾಲರ್ ಇದೆ.
ಅದಾನಿ ಸಮೂಹದ ಮೂಲಸೌಕರ್ಯ, ಸರಕುಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಮತ್ತು ರಿಯಲ್ ಎಸ್ಟೇಟ್ ಮೊದಲಾದ ಕ್ಷೇತ್ರಗಳಿಗೆ ವ್ಯಾಪಿಸಿದೆ. ಅದಾನಿ ಇತ್ತೀಚೆಗೆ ತಮ್ಮ 60 ನೇ ಹುಟ್ಟುಹಬ್ಬದಂದು ಸಾಮಾಜಿಕ ಉದ್ದೇಶಗಳಿಗಾಗಿ 60,000 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅದನ್ನು ಅದಾನಿ ಫೌಂಡೇಶನ್ ನಿರ್ವಹಣೆಯ ಅಡಿಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಬಳಸಲಾಗುತ್ತದೆ.