ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ 60ನೇ ಜನ್ಮದಿನದ ಅಂಗವಾಗಿ ಸಮಾಜಸೇವೆಗೆ 60 ಸಾವಿರ ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಗೌತಮ್ ಅದಾನಿ ಶುಕ್ರವಾರ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಒಂದು ದಿನ ಮೊದಲು ಈ ಬಗ್ಗೆ ಘೋಷಣೆ ಮಾಡಿರುವ ಅವರು, ಆರೋಗ್ಯ ಸೇವೆ, ಶಿಕ್ಷಣ, ಕೌಶಲಾಭಿವೃದ್ಧಿ ಮೊದಲಾದವುಗಳಿಗಾಗಿ ದೇಣಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ತಂದೆ ಶಾಂತಿಲಾಲ್ ಅದಾನಿ ಜನಿಸಿ ನೂರು ವರ್ಷಗಳು ಪೂರೈಸಿವೆ. ಈ ಹಿನ್ನೆಲೆಯಲ್ಲಿ ದೇಶದ ಕಾರ್ಪೊರೇಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯದ ದೇಣಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.