ಬೆಂಗಳೂರು: ಗಾರ್ಮೆಂಟ್ಸ್ ಕಾರ್ಮಿಕರಿಗೆ ತುಟ್ಟಿ ಭತ್ಯೆ ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಹೆಚ್ಚಳವಾಗಬೇಕಿದ್ದ ತುಟ್ಟಿಭತ್ಯೆ ಕೊಡಲು ಮಾಲೀಕರು ಒಪ್ಪಿಕೊಂಡಿದ್ದು, ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್ ಮಾಹಿತಿ ನೀಡಿದೆ.
2020 -21ನೇ ಗ್ರಾಹಕರ ಸೂಚ್ಯಂಕ ದರ ಪರಿಷ್ಕರಣೆ ಅನ್ವಯ ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರ ತುಟ್ಟಿಭತ್ಯೆ 2020ರ ಏಪ್ರಿಲ್ ನಿಂದ ದಿನಕ್ಕೆ 16.06 ರೂ. ನಂತೆ ಏರಿಕೆಯಾಗಬೇಕಿತ್ತು. ಆದರೆ, ಕೋರೋನಾ ಲಾಕ್ ಡೌನ್ ಕಾರಣದಿಂದ ಏರಿಕೆಯಾಗಿರಲಿಲ್ಲ.
ತುಟ್ಟಿಭತ್ಯೆ ಏರಿಕೆ ಮುಂದೂಡಬೇಕೆಂದು ಕಾರ್ಖಾನೆಗಳ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ 2021 ರ ಮಾರ್ಚ್ 31 ರವರೆಗೆ ತುಟ್ಟಿಭತ್ಯೆ ಏರಿಕೆಯನ್ನು ಮುಂದೂಡಿದ್ದು, ಇದನ್ನು ಕಾರ್ಮಿಕ ಸಂಘಟನೆಗಳು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಹೀಗಿದ್ದರೂ ಕಾರ್ಖಾನೆಗಳ ಮಾಲೀಕರು ಹೆಚ್ಚುವರಿ ತುಟ್ಟಿ ಭತ್ಯೆ ಪಾವತಿಸಿರಲಿಲ್ಲ. ನಿರಂತರ ಒತ್ತಡ ಮತ್ತು ಪ್ರಯತ್ನದ ನಂತರ ಹೋರಾಟಕ್ಕೆ ಜಯ ದೊರೆತಿದೆ. ತುಟ್ಟಿಭತ್ಯೆ ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ.
2020 ಏಪ್ರಿಲ್ ನಿಂದ ತಿಂಗಳಿಗೆ 417 ರೂ.ನಂತೆ ಜಾರಿಗೊಳಿಸಬೇಕಿದ್ದ ತುಟ್ಟಿಭತ್ಯೆ ಮೊತ್ತವನ್ನು 2022ರ ಫೆಬ್ರವರಿ ವೇತನದಲ್ಲಿ ಸೇರಿಸಲು ಮಾಲೀಕರು ಒಪ್ಪಿಕೊಂಡಿರುವುದಾಗಿ ಯೂನಿಯನ್ ಸಲಹೆಗಾರ ಕೆ.ಆರ್. ಜಯರಾಮ್ ಮಾಹಿತಿ ನೀಡಿದ್ದಾರೆ.