ನವದೆಹಲಿ: ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳ ಮೇಲೆ ಹಸಿರು ತೆರಿಗೆ ಪ್ರಸ್ತಾಪವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದಿಸಿದ್ದಾರೆ.
ಕೆಲವು ವರ್ಗದ ವಾಹನಗಳಿಗೆ ಹಸಿರು ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು, ಹಳೆಯ ಮತ್ತು ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಹಂತ ಹಂತವಾಗಿ ಹೊರಹಾಕಲು ವೇದಿಕೆ ಕಲ್ಪಿಸಲಾಗಿದೆ. ರಾಜ್ಯಗಳಿಗೆ ಸಮಾಲೋಚನೆಗಾಗಿ ಈ ಪ್ರಸ್ತಾಪವನ್ನು ಕಳುಹಿಸಲಾಗುವುದು.
ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಒಡೆತನದ ವಾಹನಗಳನ್ನು ನೋಂದಾಯಿಸುವುದು ಮತ್ತು ರದ್ದುಗೊಳಿಸುವ ನೀತಿಯನ್ನು ಸಚಿವರು ಅನುಮೋದಿಸಿದ್ದಾರೆ. ಇಂತಹ ವಾಹನಗಳು 15 ವರ್ಷಕ್ಕಿಂತ ಹೆಚ್ಚು ಹಳೆಯದಾಗಿರಬೇಕು. 2022 ರ ಏಪ್ರಿಲ್ 1 ರಿಂದ ಫಿಟ್ನೆಸ್ ಪ್ರಮಾಣಪತ್ರ ನವೀಕರಿಸುವ ಸಮಯದಲ್ಲಿ ಸಾರಿಗೆ ಅಥವಾ ವಾಣಿಜ್ಯ ವಾಹನಗಳ ಮೇಲೆ ಎಂಟು ವರ್ಷಕ್ಕಿಂತ ಹಳೆಯ ಹಸಿರು ತೆರಿಗೆ ವಿಧಿಸಬಹುದು.
ರಸ್ತೆ ತೆರಿಗೆ ಶೇಕಡ 10 ರಿಂದ 25 ರಷ್ಟು ಇರಬೇಕು. 15 ವರ್ಷಗಳ ನಂತರ ನೋಂದಣಿ ಪ್ರಮಾಣ ಪತ್ರವನ್ನು ನವೀಕರಿಸುವ ಸಂದರ್ಭದಲ್ಲಿ ತೆರಿಗೆ ವಿಧಿಸಬಹುದಾಗಿದೆ. ಪ್ರಸ್ತುತ ಉತ್ತರಪ್ರದೇಶ, ಗೋವಾ, ಮಹಾರಾಷ್ಟ್ರದ ಕೆಲವು ರಾಜ್ಯಗಳಲ್ಲಿ ಇಂತಹ ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಇಂತಹ ತೆರಿಗೆ ವ್ಯವಸ್ಥೆ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಬಳಸದಂತೆ ಗ್ರಾಹಕರನ್ನು ತಡೆಯುತ್ತದೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳಂತಹ ಹೊಸ ಮತ್ತು ಕಡಿಮೆ ಮಾಲಿನ್ಯಕಾರಕ ವಾಹನಗಳಿಗೆ ಬದಲಾಯಿಸಲು ಉತ್ತೇಜನ ನೀಡಬಹುದಾಗಿದೆ. ಸಿಟಿ ಬಸ್ ಗಳಂತಹ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಕಡಿಮೆ ಹಸಿರು ತೆರಿಗೆ ವಿಧಿಸಲಾಗುವುದು ಎಂದು ಹೇಳಲಾಗಿದೆ.
ಪ್ರಸ್ತಾಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ವಾಹನಗಳನ್ನು ಅವಲಂಬಿಸುವ ಬದಲು ಹೈಬ್ರಿಡ್ ವಾಹನ, ಎಲೆಕ್ಟ್ರಿಕ್ ವಾಹನ ಬಳಕೆ, ಪರ್ಯಾಯ ಇಂಧನಗಳಾದ ಸಿ.ಎನ್.ಜಿ., ಎಥೆನಾಲ್, ಎಲ್.ಪಿ.ಜಿ. ವಾಹನಗಳಿಗೆ ವಿನಾಯಿತಿ ನೀಡುವುದು. ಕೃಷಿಯಲ್ಲಿ ಬಳಸುವ ವಾಹನಗಳಾದ ಟ್ರ್ಯಾಕ್ಟರ್, ಹಾರ್ವೆಸ್ಟರ್, ಟಿಲ್ಲರ್ ಗಳಿಗೆ ವಿನಾಯಿತಿ ನೀಡಲಾಗುವುದು. ಹಸಿರು ತೆರಿಗೆಯಿಂದ ಗಳಿಸಿದ ಆದಾಯವನ್ನು ಪ್ರತ್ಯೇಕ ಖಾತೆಯಲ್ಲಿ ಇರಿಸಿ ಅದನ್ನು ಮಾಲಿನ್ಯ ತಡೆ ನಿರ್ವಹಣೆಗೆ ಬಳಸಬೇಕಾಗುತ್ತದೆ. ಮಾಲಿನ್ಯ ಹೊಸಸೂಸುವಿಕೆ ಮೇಲ್ವಿಚಾರಣೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂದು ಹೇಳಲಾಗಿದೆ.