
ಲಾಕ್ ಡೌನ್ ಸಂದರ್ಭದಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸಿ, ಟಿಕೆಟ್ ಹಣದ ಮರು ಪಾವತಿಗೆ ಕಾಯ್ತಿರುವ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದಿದೆ. 2020ರ ಮಾರ್ಚ್ 25 ರಿಂದ ಮೇ. 3 ರವರೆಗೆ ಖರೀದಿಸಿದ ಟಿಕೆಟ್‌ಗಳ ಸಂಪೂರ್ಣ ಮೊತ್ತವನ್ನು ವಿಮಾನಯಾನ ಕಂಪನಿಗಳು ಹಿಂದಿರುಗಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ರಾಮ್ ಕೃಪಾಲ್ ಯಾದವ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಮಾಹಿತಿ ನೀಡಿದ್ದಾರೆ. ಟಿಕೆಟ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಯಾವುದೇ ರದ್ದತಿ ಶುಲ್ಕವನ್ನು ವಿಧಿಸದೆ ಮಾರ್ಚ್ 25 ರಿಂದ ಮೇ.3 ರವರೆಗೆ ಕಾಯ್ದಿರಿಸಿದ್ದ ಟಿಕೆಟ್ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸಲು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆಯೇ ಎಂದು ಯಾದವ್ ಪ್ರಶ್ನೆ ಕೇಳಿದ್ದರು.
ಈ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಲಿಖಿತ ಉತ್ತರ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಸುತ್ತೋಲೆ ಹೊರಡಿಸಿದ್ದು, ವಿಮಾನಯಾನ ಸಂಸ್ಥೆಗಳಿಗೆ ಹಣ ಮರುಪಾವತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ನಿಗದಿತ ಅವಧಿಯಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಿದ ಟಿಕೆಟ್‌ಗಳ ಸಂಪೂರ್ಣ ಮೊತ್ತವನ್ನು ವಿಮಾನಯಾನ ಸಂಸ್ಥೆಗಳು ಹಿಂದಿರುಗಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.