ಮುಂಬೈ: ಸೌದಿ ಅರೇಬಿಯಾದ ತೈಲ ಕೇಂದ್ರದ ಮೇಲೆ ಬಂಡುಕೋರರು ದಾಳಿ ನಡೆಸಿದ ನಂತರದಲ್ಲಿ ಮೊದಲ ಬಾರಿಗೆ ಕಚ್ಚಾತೈಲದ ದರ 70 ಡಾಲರ್ ನಷ್ಟು ಏರಿಕೆಯಾಗಿದೆ. ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಹೆಚ್ಚಳವಾಗಲಿದೆ.
ಭಾರತದಲ್ಲಿ ಚಿಲ್ಲರೆ ಇಂಧನ ದರ ಮತ್ತಷ್ಟು ಹೆಚ್ಚಳವಾಗಲಿದೆ. ದೆಹಲಿಯಲ್ಲಿ ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ಗೆ 91.17 ರೂಪಾಯಿ, ಡೀಸೆಲ್ ಒಂದು ಲೀಟರ್ಗೆ 81.47 ರೂಪಾಯಿ ಇದ್ದು, ಮುಂಬೈನಲ್ಲಿ ಪೆಟ್ರೋಲ್ 97.57 ರೂ, ಡೀಸೆಲ್ 88.60 ರೂಪಾಯಿಗೆ ಮಾರಾಟವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.
ಕಳೆದವಾರ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್ ಏಪ್ರಿಲ್ ನಿಂದ ತೈಲ ಉತ್ಪಾದನೆ ಹೆಚ್ಚಳ ಮಾಡುವ ಬಗ್ಗೆ ಹೇಳಿದ್ದು ತೈಲ ಬೆಲೆ ಗಗನಕ್ಕೇರುವಂತೆ ಮಾಡಿದೆ. ಯೆಮನ್ ಹೌತಿ ಬಂಡುಕೋರರು ಸೌದಿಅರೇಬಿಯಾದ ತೈಲ ಸಂಗ್ರಹಗಾರಗಳ ಮೇಲೆ ದಾಳಿ ನಡೆಸಿವೆ. ಭಾನುವಾರ ದಾಳಿ ನಡೆದಿದ್ದು, ಜಾಗತಿಕ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಸೌದಿ ಅರೇಬಿಯಾ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಶೇಕಡ 10 ರಷ್ಟು ಪಾಲು ಹೊಂದಿದೆ. ಭಾರತಕ್ಕೆ ತೈಲ ಮಾರಾಟ ಮಾಡುವುದರಲ್ಲಿ ಎರಡನೇ ಸ್ಥಾನದಲ್ಲಿದೆ.
ಹೆಚ್ಚುತ್ತಿರುವ ಕಚ್ಚಾತೈಲದ ಬೆಲೆ ಆಮದು ಅವಲಂಬಿತ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಹಿಂಜರಿತದಿಂದ ಒತ್ತಡ ಹೆಚ್ಚಾಗಿದೆ. ಕಳೆದ ವರ್ಷದಲ್ಲಿ ಬೆಲೆ ಕಡಿಮೆಯಾದ ಸಂದರ್ಭದಲ್ಲಿ ಇಂಧನಕ್ಕೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಮಧ್ಯಮವರ್ಗದವರಿಗೆ, ಬಡವರಿಗೆ ತೊಂದರೆಯಾಗದಂತೆ ತೆರಿಗೆಯನ್ನು ಉಳಿಸಿಕೊಳ್ಳುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಕಚ್ಚಾತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇನ್ನೂ ಹೆಚ್ಚಾಗಲಿದೆ. ಕೆಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂಪಾಯಿ ದಾಟಿದೆ. ಇದರಿಂದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಅಸ್ಸಾಂ ಮತ್ತು ತ್ರಿಪುರಾದಂತಹ ಕೆಲವು ರಾಜ್ಯಗಳಲ್ಲಿ ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ್ದರೂ ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ಬಹುತೇಕ ರಾಜ್ಯಗಳು ತೆರಿಗೆ ಕಡಿತಗೊಳಿಸಿಲ್ಲ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಬೇಕು ಎಂಬ ಒತ್ತಾಯ ತೀವ್ರಗೊಂಡಿದೆ.
ಅಡುಗೆ ಅನಿಲ ದರ ಕೂಡ ಭಾರೀ ಏರಿಕೆ ಕಂಡಿದ್ದು, ಕಳೆದ ವರ್ಷ ಮಾರ್ಚ್ ನಲ್ಲಿ 574 ರೂಪಾಯಿ ಇದ್ದ ಸಿಲಿಂಡರ್ ದರ ಶೇಕಡ 43 ರಷ್ಟು ಜಾಸ್ತಿಯಾಗಿ 819 ರೂಪಾಯಿಗೆ ತಲುಪಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಆಡಳಿತ ಸರ್ಕಾರಕ್ಕೆ ಇಂಧನ ಬೆಲೆ ಏರಿಕೆ ಬಿಸಿತುಪ್ಪವಾಗಿದೆ.