ಗ್ರಾಹಕ ಸಂರಕ್ಷಣಾ ಕಾಯ್ದೆ 2019ಕ್ಕೆ ಹೆಚ್ಚಿನ ನಿಬಂಧನೆ ಸೇರಿಸಿ ಪ್ರಕಟಿಸಿರುವ ಕಾನೂನು ಜುಲೈ 20 ರಿಂದ ಜಾರಿಗೆ ಬರುತ್ತಿದೆ.
ಹೊಸ ಕಾನೂನಿನ ಪ್ರಕಾರ, ಗ್ರಾಹಕರು ತಾವೆಲ್ಲೇ ಉತ್ಪನ್ನ ಖರೀದಿ ಅಥವಾ ಸೇವೆ ಪಡೆದುಕೊಂಡಿದ್ದರೂ ತಾವಿರುವ ಜಿಲ್ಲೆ ಅಥವಾ ರಾಜ್ಯದಿಂದಲೂ ಸಹ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.
ವಸ್ತುವಿನ ತಯಾರಕ ಅಥವಾ ಮಾರಾಟಗಾರ, ವಿತರಕರು ಕಲಬೆರೆಕೆ ಮತ್ತು ಮೋಸದ ಉತ್ಪನ್ನಗಳೊಂದಿಗೆ ವ್ಯವಹರಿಸುತ್ತಿರುವುದು ಕಂಡುಬಂದರೆ ಹೊಸ ನಿಬಂಧನೆಗಳು ಅಂತವರನ್ನು ನ್ಯಾಯಾಲಯಕ್ಕೆ ಎಳೆತರಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.
ನಕಲಿ ಅಥವಾ ಕಲಬೆರಕೆ ಮಾಡಿದ ಉತ್ಪನ್ನಕ್ಕೆ ಪರಿಹಾರ ನೀಡುವಂತೆ ಗ್ರಾಹಕರು ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಬಹುದಾಗಿದೆ.
ಸೋಮವಾರದಿಂದ ಜಾರಿಗೆ ಬರುತ್ತಿರುವ ಕಾನೂನಿನ ನಿಬಂಧನೆಗಳಿಗೆ ಹೆಚ್ಚಿನ ಬಲವಿದ್ದು, ತಪ್ಪಾದ ವ್ಯವಹಾರದ ವಿರುದ್ಧ ನ್ಯಾಯಾಲಯಗಳು ಆರು ತಿಂಗಳ ಜೈಲು ಶಿಕ್ಷೆ ಒಂದು ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.
ಗ್ರಾಹಕ ಗಾಯಗೊಂಡ ಸಂದರ್ಭಗಳಲ್ಲಿ, ವಸ್ತುವಿನ ಉತ್ಪಾದಕ, ಮಾರಾಟಗಾರ ಅಥವಾ ವಿತರಕರಿಗೆ 5 ಲಕ್ಷ ರೂ. ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗುತ್ತಿದೆ. ಗ್ರಾಹಕ ಒಂದು ವೇಳೆ ಮೃತಪಟ್ಟರೆ ಉತ್ಪಾದಕ, ವಿತರಕ, ಮಾರಾಟಗಾರನಿಗೆ ಕನಿಷ್ಠ 10 ಲಕ್ಷ ರೂ.ದಂಡ ಮತ್ತು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
ಇ ಕಾಮರ್ಸ್ ಮತ್ತು ನೇರ ಮಾರಾಟಕ್ಕೆ ಸಂಬಂಧಿಸಿದಂತೆ ಕಾಯ್ದೆಯ ನಿಬಂಧನೆಗಳನ್ನು ಸರ್ಕಾರ ಇನ್ನೂ ತಿಳಿಸಿಲ್ಲ. ಮುಂದಿನ ಒಂದೆರಡು ವಾರಗಳಲ್ಲಿ ಅದನ್ನು ಮಾಡಬಹುದು ಎಂದು ಹೇಳಲಾಗುತ್ತಿದೆ.
ಇನ್ನೂ ದೊಡ್ಡ ಮಟ್ಟದಲ್ಲಿ ಗ್ರಾಹಕರು ತೊಂದರೆ ಒಳಗಾದ ಸಂದರ್ಭದಲ್ಲಿ ಗ್ರಾಹಕರ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ.