ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಡಿಸೆಂಬರ್ 1 ರ ಇಂದಿನಿಂದ ಹಣದ ವಹಿವಾಟು ನಿಯಮಗಳಲ್ಲಿ ಬದಲಾವಣೆಯಾಗಿದೆ. ಸಾಮಾನ್ಯ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಬದಲಾವಣೆ ಕುರಿತ ಮಾಹಿತಿ ಇಲ್ಲಿದೆ.
ಕೆಲವು ತಿದ್ದುಪಡಿಗಳಿಂದಾಗಿ ಬ್ಯಾಂಕ್ ವ್ಯವಹಾರಗಳಲ್ಲಿ ಬದಲಾವಣೆಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಎಟಿಎಂನಲ್ಲಿ ಹಣ ಪಡೆಯಲು ಒಟಿಪಿ ಅಗತ್ಯವಾಗಿರುತ್ತದೆ. ಡಿಸೆಂಬರ್ 1 ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಂಗಳಲ್ಲಿ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಪಡೆಯಲು ಒಟಿಪಿ ಅಗತ್ಯವಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಮೊಬೈಲ್ ಫೋನನ್ನು ತಮ್ಮೊಂದಿಗೆ ಕೊಂಡೊಯ್ಯಲು ಸೂಚಿಸಲಾಗಿದೆ. ಒಟಿಪಿ ಅಗತ್ಯವಾಗಿರುವುದರಿಂದ ನೋಂದಾಯಿತ ಮೊಬೈಲ್ ಫೋನ್ ಗೆ ಒಟಿಪಿ ಬರಲಿದ್ದು, ಅದನ್ನು ನಮೂದಿಸಿ ಹಣ ಪಡೆಯಬಹುದಾಗಿದೆ.
ಆರ್ಟಿಜಿಎಸ್ ಸಮಯದಲ್ಲಿ ಬದಲಾವಣೆ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಅವರು ಅಕ್ಟೋಬರ್ನಲ್ಲಿ ವಿತ್ತೀಯ ನೀತಿ ಪ್ರಕಟಿಸಿ ಡಿಸೆಂಬರ್ 1 ರಿಂದ ಆರ್ಟಿಜಿಎಸ್ ಸೌಲಭ್ಯ ವರ್ಷದ ಎಲ್ಲಾ ದಿನಗಳಲ್ಲಿ ಸಿಗಲಿದೆ. ದಿನದ 24 ಗಂಟೆಯೂ 365 ದಿನವೂ ಸೌಲಭ್ಯ ಪಡೆಯಬಹುದಾಗಿದೆ. ಜಾಗತಿಕವಾಗಿ ಇಂತಹ ಸೌಲಭ್ಯ ಕಲ್ಪಿಸಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಲಿದೆ.
ಇನ್ನು ಡಿಸೆಂಬರ್ 2020 ರಿಂದ ವಿಮೆ ಪಾಲಿಸಿದಾರರು 5 ವರ್ಷಗಳ ನಂತರ ಪ್ರೀಮಿಯಂ ಅನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅರ್ಧದಷ್ಟು ಪ್ರೀಮಿಯಂ ಪಾವತಿಸಿ ವಿಮೆ ಮುಂದುವರೆಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.