ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದಿದೆ. ಏಪ್ರಿಲ್ 1ರಿಂದ ಅವ್ರ ಕೆಲಸದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರ ಗ್ರಾಚ್ಯುಟಿ, ಪಿಎಫ್ ಮತ್ತು ಕೆಲಸದ ಸಮಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.
ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ವೇತನ ಸಂಹಿತೆ ಮಸೂದೆಯಿಂದಾಗಿ ಈ ಬದಲಾವಣೆಗಳಾಗುವ ಸಾಧ್ಯತೆಯಿದೆ. ಈ ವರ್ಷ ಏಪ್ರಿಲ್ 1 ರಿಂದ ಈ ಮಸೂದೆಗಳು ಜಾರಿಗೆ ಬರುವ ಸಾಧ್ಯತೆ ಇದೆ.
ಸರ್ಕಾರದ ಯೋಜನೆಯ ಪ್ರಕಾರ, ಮೂಲ ವೇತನ ಒಟ್ಟು ವೇತನದ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಇದು ಉದ್ಯೋಗದಾತರು ಮತ್ತು ಉದ್ಯೋಗಿಗಳಿಬ್ಬರಿಗೂ ಲಾಭವಾಗಲಿದೆ.
ಮೂಲ ವೇತನ ಹೆಚ್ಚಾಗ್ತಿದ್ದಂತೆ ಪಿಎಫ್‌ನಲ್ಲಿ ಬದಲಾವಣೆಯಾಗಲಿದೆ. ಪಿಎಫ್ ಮೂಲ ವೇತನವನ್ನು ಆಧರಿಸಿರುವ ಕಾರಣ ನೌಕರರ ವೇತನ ಹಾಗೂ ಪಿಎಫ್ ನಲ್ಲಿ ಬದಲಾವಣೆಯಾಗಲಿದೆ.
ಇದಲ್ಲದೆ ಗರಿಷ್ಠ ಕೆಲಸದ ಸಮಯವನ್ನು 12 ಕ್ಕೆ ಹೆಚ್ಚಿಸಲು ಸಹ ಪ್ರಸ್ತಾಪಿಸಲಾಗಿದೆ. 15 ರಿಂದ 30 ನಿಮಿಷಗಳವರೆಗೆ ಹೆಚ್ಚುವರಿ ಕೆಲಸ ಮಾಡಿದ್ರೆ ಅದನ್ನು ಓವರ್ ಟೈಂ ಗೆ ಸೇರಿಸುವ ಸಾಧ್ಯತೆಯಿದೆ. ಪ್ರಸ್ತುತ 30 ನಿಮಿಷಗಳಿಗಿಂತ ಕಡಿಮೆ ಕಾಲ ಮಾಡುವ ಹೆಚ್ಚುವರಿ ಕೆಲಸವನ್ನು ಓವರ್ ಟೈಂಗೆ ಸೇರಿಸುವುದಿಲ್ಲ.
5 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡುವುದನ್ನು ನಿಷೇಧಿಸಲಾಗುವುದು. 5 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ನೌಕರರಿಗೆ ಅರ್ಧ ಗಂಟೆಯ ವಿರಾಮ ನೀಡಬೇಕು ಎಂದು ಸರ್ಕಾರ ಹೇಳಿದೆ. ಪಿಎಫ್ ಮೊತ್ತದ ಹೆಚ್ಚಳದಿಂದಾಗಿ ನಿವೃತ್ತಿ ಮೊತ್ತವೂ ಹೆಚ್ಚಾಗಲಿದೆ.