ಬೆಂಗಳೂರು: ಉಚಿತ ವಿದ್ಯುತ್ ಸೌಲಭ್ಯದ ಗೃಹಜ್ಯೋತಿ ಯೋಜನೆಗೆ ಭಾನುವಾರ ಸಂಜೆ 4 ಗಂಟೆವರೆಗೆ 5.56 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ.
ಇದರೊಂದಿಗೆ ಯೋಜನೆಗೆ ನೋಂದಾಯಿಸಿಕೊಂಡವರ ಸಂಖ್ಯೆ 50 ಲಕ್ಷ ದಾಟಿದೆ. 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ 2.14 ಕೋಟಿ ಫಲಾನುಭವಿಗಳನ್ನು ಸರ್ಕಾರ ಗುರುತಿಸುತ್ತಿದ್ದು, ಶೇ. 24 ರಷ್ಟು ನೋಂದಣಿ ಪೂರ್ಣಗೊಂಡಿದೆ.
ನೋಂದಣಿಗೆ ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಮೊದಲ ದಿನ 55,000 ಮಂದಿ ನೊಂದಾಯಿಸಿಕೊಂಡಿದ್ದರು. ಇದಕ್ಕಾಗಿ ಈ ಆಡಳಿತ ಇಲಾಖೆ ಪ್ರತ್ಯೇಕ ಲಿಂಕ್ ನೀಡಿದೆ. https://sevasindhugs.karnataka.in ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಸೇವಾ ಕೇಂದ್ರಗಳಲ್ಲಿ ಬೇರೆ ಲಿಂಕ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಬೆಸ್ಕಾಂ 20.55 ಲಕ್ಷ, ಸೆಸ್ಕಾಂ ಮೈಸೂರು 7.9 ಲಕ್ಷ, ಚೆಸ್ಕಾಂ ಕಲಬುರ್ಗಿ 5.66 ಲಕ್ಷ, ಹೆಸ್ಕಾಂ ಹುಬ್ಬಳ್ಳಿ 10.82 ಲಕ್ಷ, ಮೆಸ್ಕಾಂ ಮಂಗಳೂರು 5.98 ಲಕ್ಷ ಸೇರಿ ಒಟ್ಟು 51.17 ಲಕ್ಷ ನೋಂದಣಿಯಾಗಿದೆ. ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳು, ವಿದ್ಯುತ್ ಕಚೇರಿಗಳಲ್ಲಿ, ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾಹಿತಿಗಾಗಿ 1912ಕ್ಕೆ ಕರೆ ಮಾಡಬಹುದಾಗಿದೆ.